ಸೋಮವಾರ, ನವೆಂಬರ್ 18, 2019
20 °C
ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಟೀಕೆ

ಸಂತ್ರಸ್ತರಿಗೆ ಸ್ಪಂದಿಸದ ಸಿ.ಎಂ ಚುನಾವಣೆ ಪ್ರಚಾರಕ್ಕೆ

Published:
Updated:
Prajavani

ಶಿರಸಿ: ‘ನೆರೆ ಸಂತ್ರಸ್ತರಿಗೆ ಯುದ್ಧೋಪಾದಿಯಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗ ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕೆ ಹೋಗಿದ್ದು, ರೈತಪರ ಅವರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಟೀಕಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈಮಾನಿಕ ಸಮೀಕ್ಷೆ ನಡೆಸಿದರೆ, ರೈತರ ನೋವು, ಸಂಕಷ್ಟ ಅರಿವಿಗೆ ಬರಲು ಸಾಧ್ಯವಿಲ್ಲ. ರಾಜ್ಯದ ಬೊಕ್ಕಸ ಖಾಲಿಯಾಗಿದ್ದಿದ್ದರೆ ಅದನ್ನು ಖಾಲಿ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೇ ವಿನಾ ರಾಜ್ಯದ ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡಬಾರದು’ ಎಂದರು.

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ₹ 19ಸಾವಿರ ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ಪ್ರವಾಹದಲ್ಲಿ ಸಂತ್ರಸ್ತರಾದವರ ಬಗ್ಗೆ ಉದಾಸೀನ ತೋರುತ್ತಿರುವುದು ರೈತರಿಗೆ ಮಾಡುತ್ತಿರುವ ಅವಮಾನವಾಗಿದೆ. ಸಹಕಾರಿ ಸಂಸ್ಥೆ ಹಾಗೂ ಬ್ಯಾಂಕ್‌ಗಳಿಂದ ಕೃಷಿಕರಿಗಾಗುತ್ತಿರುವ ಕಿರುಕುಳ ತಪ್ಪಿಸಬೇಕು. ಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ನೆರೆ ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡದಿದ್ದರೆ ಅ.22ರಂದು ರೈತ ಸಂಘದ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ರಾಘವೇಂದ್ರ ನಾಯ್ಕ, ಸತೀಶ ನಾಯ್ಕ, ವೀರಭದ್ರ ನಾಯ್ಕ, ಜಾಕೀರ್ ದಾಸನಕೊಪ್ಪ ಉಪಸ್ಥಿತರಿದ್ದರು.

ನಂತರ ಅಧಿಕಾರಿಗಳನ್ನು ಭೇಟಿ ಮಾಡಿದ ಕೋಡಿಹಳ್ಳಿ ಚಂದ್ರಶೇಖರ, ತಾಲ್ಲೂಕಿನಲ್ಲಿ ಆಗಿರುವ ಬೆಳೆಹಾನಿ, ಪರಿಹಾರ ವಿತರಣೆಯ ಬಗ್ಗೆ ಮಾಹಿತಿ ಪಡೆದರು.

 

ಪ್ರತಿಕ್ರಿಯಿಸಿ (+)