ಶನಿವಾರ, ಜುಲೈ 24, 2021
22 °C
ಕೆರವಡಿ ಗ್ರಾಮದಲ್ಲಿ ಹಲವು ಸಮಸ್ಯೆಗಳಿಗೆ ಗ್ರಾಮಸ್ಥರ ಬೇಸರ

ಕಾರವಾರ: ನಗೆ ಅಳಿಸಿದ ಸೌಕರ್ಯದ ಕೊರತೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಈ ಊರಿನ ಹೆಸರಿನಲ್ಲಿ ‘ನಗೆ’ಯಿದೆ. ಆದರೆ, ಮೂಲ ಸೌಕರ್ಯಗಳಿಲ್ಲದೇ ಸ್ಥಳೀಯರು ಪರದಾಡುತ್ತಿದ್ದಾರೆ. ಹತ್ತಾರು ಬಾರಿ ಮನವಿ ಮಾಡಿದರೂ ಕೆಲಸಗಳಾಗುತ್ತಿಲ್ಲ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ಬಗ್ಗೆ ಬೇಸರಗೊಂಡಿದ್ದಾರೆ. 

ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ‘ನಗೆ’ ಎಂಬ ಊರಿನ ಸ್ಥಿತಿಯಿದು. ಈ ಹಳ್ಳಿ, ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಆದರೆ, ರಸ್ತೆ, ವಿದ್ಯುತ್ ಮತ್ತು ಮೊಬೈಲ್ ಸಿಗ್ನಲ್ ವಿಚಾರದಲ್ಲಿ ತೀರಾ ಬಡವಾಗಿದ್ದಾರೆ.

ಗ್ರಾಮ ಕೇಂದ್ರ ದೇವಳಮಕ್ಕಿಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಈ ಊರಿನ ಒಳಗೆ ಮಳೆಗಾಲದಲ್ಲಿ ಇಂದಿಗೂ ವಾಹನಗಳು ಹೋಗುವುದಿಲ್ಲ. ಗ್ರಾಮದ ಮುಖ್ಯ ರಸ್ತೆ ಮತ್ತು ಜಮೀನನ್ನು ಪ್ರತ್ಯೇಕಿಸುವ ಹಳ್ಳಕ್ಕೆ ವಿಸ್ತಾರವಾದ ಸೇತುವೆ ಹಾಗೂ ಅಲ್ಲಿಂದ ಮುಂದೆ ರಸ್ತೆ ನಿರ್ಮಾಣವಾಗದಿರುವುದೇ ಇದಕ್ಕೆ ಕಾರಣ. ಮುಖ್ಯ ರಸ್ತೆಯಿಂದ ಸುಮಾರು ಮುಕ್ಕಾಲು ಕಿಲೋಮೀಟರ್ ಮಾತ್ರ ರಸ್ತೆ ಆಗಬೇಕಿದೆ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಬೇಸರವಾಗಿದೆ.

‘ಹಳ್ಳದ ಕಿರು ಸೇತುವೆಯ ಎರಡೂ ಬದಿಗೆ ಮೂರು ದಿನಗಳ ಹಿಂದೆ ಮಣ್ಣು ಹಾಕಿದ್ದಾರೆ. ಹಾಗಾಗಿ ಹಳ್ಳವನ್ನು ನಡೆದುಕೊಂಡು ದಾಟಬಹುದು. ಆದರೆ, ಮಳೆಯಿಂದಾಗಿ ಕೆಸರಾಗಿದ್ದು, ನೆಲ ಜಾರುತ್ತದೆ’ ಎಂದು ಗ್ರಾಮಸ್ಥ ಪ್ರಶಾಂತ ಹೆಗಡೆ ಬೇಸರಿಸುತ್ತಾರೆ.

‘ಬೇಸಿಗೆಯಲ್ಲಿ ಹಳ್ಳವನ್ನು ದಾಟಿಕೊಂಡು ವಾಹನಗಳು ಬರುತ್ತಿದ್ದವು. ಆದರೆ, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಕಾರಣ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಬೇಕಿದೆ. ಏನೇ ಬೇಕಿದ್ದರೂ ಅಲ್ಲಿಂದ ತಲೆ ಹೊರೆಯಲ್ಲೇ ತರಬೇಕಿದೆ’ ಎಂದರು.

ಬಸ್ ಸಮಸ್ಯೆ

ಗ್ರಾಮದಲ್ಲಿ ಬಸ್ ಸಂಚಾರದ ಸಮಸ್ಯೆಯೂ ಇದೆ. ಶಾಲೆಗಳು ಆರಂಭವಾದಾಗ ಮಾತ್ರ ಬೆಳಿಗ್ಗೆ ಎಂಟಕ್ಕೆ ಹಾಗೂ ಸಂಜೆ 4.30ಕ್ಕೆ ಬಸ್ ಬರುತ್ತದೆ. ಹಾಗಾಗಿ ಊರಿನ ಜನರೆಲ್ಲ ದ್ವಿಚಕ್ರ ವಾಹನಗಳು ಅಥವಾ ನಡಿಗೆಯನ್ನೇ ಅವಲಂಬಿಸಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಕಂಗೆಟ್ಟಿರುವ ಸ್ಥಳೀಯರು, ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ವಿದ್ಯುತ್ ಸಮಸ್ಯೆ ಗಂಭೀರ

‘ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾಗಿದೆ. ಜೂನ್ 11ಕ್ಕೆ ಹೋದ ವಿದ್ಯುತ್ ಇನ್ನೂ ಬಂದಿಲ್ಲ. ಹೆಸ್ಕಾಂನವರು ಫೋನ್ ಕರೆಗೆ ಸ್ಪಂದಿಸುವುದೇ ಇಲ್ಲ. ಕಡವಾಡದಿಂದ ನಗೆ, ಕೋವೆ, ನೇವಳಿ ಹಾಗೂ ದೇವಳಮಕ್ಕಿಗೆ ವಿದ್ಯುತ್‌ ಬರುತ್ತದೆ. ಇಲ್ಲೆಲ್ಲ ಸಮಸ್ಯೆ ಇದ್ದೇ ಇದೆ. ಹಾಗಾಗಿ ನಾವು ಸೌರ ವಿದ್ಯುತ್ ಫಲಕ ಅಳವಡಿಸಿಕೊಂಡಿದ್ದೇವೆ’ ಎನ್ನುತ್ತಾರೆ ಪ್ರಶಾಂತ ಹೆಗಡೆ.

‘ದೇವಳಮಕ್ಕಿಯಲ್ಲಿರುವ ಬಿ.ಎಸ್.ಎನ್.ಎಲ್ ಮೊಬೈಲ್ ಟವರ್ ಸಿಗ್ನಲ್ ನಗೆ ಊರಿಗೆ ಅಲ್ಪಸ್ವಲ್ಪ ಬರುತ್ತದೆ. ಇದರ ಬಲವರ್ಧಿಸಿಕೊಳ್ಳಲು ಮನೆಯಲ್ಲಿ ಸಿಗ್ನಲ್ ಬೂಸ್ಟರ್ ಅಳವಡಿಸಿದ್ದೇವೆ. ಇದಕ್ಕೂ ಸಾವಿರಾರು ರೂಪಾಯಿ ಖರ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಯಾರೂ ಕೇಳಲೂ ಬರುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ನಗೆ ಗ್ರಾಮದಲ್ಲಿ ರಸ್ತೆಗೆ ಖಾಸಗಿ ಜಮೀನಿನ ಮಾಲೀಕರೊಂದಿಗೆ ಮಾತುಕತೆ ಮಾಡಲಾಗಿದೆ. ವಿದ್ಯುತ್, ಮೊಬೈಲ್ ಸಿಗ್ನಲ್ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅರುಣಾ ಪ್ರತಿಕ್ರಿಯಿಸಿದ್ದಾರೆ.

***

ಅಂಕಿ ಅಂಶ

70

ನಗೆಯಲ್ಲಿರುವ ಮನೆಗಳು

400

ಅಂದಾಜು ಜನಸಂಖ್ಯೆ

30 ಕಿ.ಮೀ

ಕಾರವಾರದಿಂದ ಅಂತರ

6 ಕಿ.ಮೀ

ದೇವಳಮಕ್ಕಿಯಿಂದ ಅಂತರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು