ಗದ್ದೆ ಹದಗೊಳಿಸುವ ಭರಾಟೆ ಜೋರು

ಶುಕ್ರವಾರ, ಜೂಲೈ 19, 2019
24 °C
ಮುಂಗಾರು ವಿಳಂಬ; ಕೃಷಿ ಚಟುವಟಿಕೆಗೆ ಹಿನ್ನಡೆ, ಮಳೆಗಾಗಿ ಕಾಯುತ್ತಿರುವ ಅನ್ನದಾತರು,

ಗದ್ದೆ ಹದಗೊಳಿಸುವ ಭರಾಟೆ ಜೋರು

Published:
Updated:
Prajavani

ಶಿರಸಿ: ಕೃಷಿಯೇ ಜೀವನಾಧಾರವಾಗಿರುವ ತಾಲ್ಲೂಕಿನ ಪೂರ್ವ ಭಾಗದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಗದ್ದೆ ಹದಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ನಾಲ್ಕಾರು ದಿನಗಳ ಹಿಂದೆ ಸುರಿದ ಮಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಬಿಸಿಲಿನಿಂದ ಬಾಯ್ದೆರೆದಿದ್ದ ಭುವಿಗೆ ತಂಪನೆರೆದಿತ್ತು. ರೈತರು ಗದ್ದೆ ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದರು. ಆದರೆ, ಮತ್ತೆ ಎರಡು ದಿನಗಳಿಂದ ಮೋಡ ಮರೆಯಾಗಿ, ಬಿಸಿಲು ಬೀಳುತ್ತಿದೆ.

‘ಏಪ್ರಿಲ್ ಕೊನೆಯಲ್ಲಿ ಬರುವ ಭರಣಿ ಮಳೆಗೆ ರೈತರು ಗದ್ದೆ ಹದಗೊಳಿಸಿ, ಬಿತ್ತನೆ ಆರಂಭಿಸುತ್ತಿದ್ದರು. ಈ ಬಾರಿ, ರೈತರು ಒಂದೂವರೆ ತಿಂಗಳು ತಡವಾಗಿ ಈಗ ಗದ್ದೆಗಿಳಿದಿದ್ದಾರೆ. ಮಳೆ ತಡವಾದ ಕಾರಣ ಈ ಬಾರಿ ಬೇಗ ಬೆಳೆ ಬರುವ ಗುಡ್ಡ ಭತ್ತ, ಹಾಲ್ದಡಗ್ಯಾ, ಜಯಾ, 1010 ಜಾತಿಯ ಭತ್ತವನ್ನು ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ. ಈ ತಳಿಗಳು ನಾಲ್ಕು ತಿಂಗಳಿಗೆ ಕೊಯ್ಲಿಗೆ ಬರುತ್ತವೆ’ ಎನ್ನುತ್ತಾರೆ ರೈತ ಆನಂದ ಗೌಡ.

‘ಜೋಳ ಮತ್ತು ಭತ್ತ ಬಿತ್ತನೆ ಈಗ ಆರಂಭವಾಗಿದೆ. ನೀರಾವರಿ ಇದ್ದವರು ಕೆಲ ದಿನಗಳ ಹಿಂದೆಯೇ ಶುಂಠಿ ಬಿತ್ತನೆ ಮಾಡಿದ್ದರು. ಮಳೆಯನ್ನು ಅವಲಂಬಿಸಿರುವವರು ಈಗ ಬಿತ್ತನೆ ಮಾಡುತ್ತಿದ್ದಾರೆ. ಕಳೆದ ವರ್ಷ ಹಲವರಿಗೆ ಅಡಿಕೆ ಬೆಳೆ ವಿಮೆ ದೊರೆತಿಲ್ಲ. ಸ್ವಾತಿ ಮಳೆಯಿಂದ ಜೋಳ ತೊಳೆದುಕೊಂಡು ಹೋಗಿ, ರೈತರು ನಷ್ಟ ಅನುಭವಿಸಿದರೂ ಸಿಕ್ಕಿರುವ ಪರಿಹಾರ ಕೊಂಚ ಮಾತ್ರ. ಬನವಾಸಿ ಹೋಬಳಿಯನ್ನು ಅತಿವೃಷ್ಟಿ–ಅನಾವೃಷ್ಟಿ ಪ್ರದೇಶವೆಂದು ಘೋಷಿಸಿ, ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಅವರು ಆಗ್ರಹಿಸಿದರು. 

‘ತಾಲ್ಲೂಕಿನಲ್ಲಿ 5911 ಹೆಕ್ಟೇರ್ ನಾಟಿ, 2702 ಹೆಕ್ಟೇರ್ ಭತ್ತ ಬಿತ್ತನೆ, 598 ಹೆಕ್ಟೇರ್ ಜೋಳ ಬಿತ್ತನೆಯ ಗುರಿ ಹೊಂದಲಾಗಿದೆ. ಮುಂಗಾರು ವಿಳಂಬವಾಗಿರುವ ಕಾರಣ ಭತ್ತ ಬಿತ್ತನೆ ಪ್ರದೇಶ ಕಡಿಮೆಯಾಗಿ, ರೈತರು ನಾಟಿ ಪದ್ಧತಿಗೆ ಹೋಗುವ ಸಾಧ್ಯತೆಯಿದೆ. ಬನವಾಸಿ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತದ ಬೀಜ ಮಾರಾಟಕ್ಕೆ ಇಡಲಾಗಿದೆ. ಈಗಾಗಲೇ 50 ಕ್ವಿಂಟಲ್‌ನಷ್ಟು ಬೀಜ ಮಾರಾಟವಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !