ಶನಿವಾರ, ಆಗಸ್ಟ್ 13, 2022
27 °C
ಮೊದಲ ಹಂತದ ಚುನಾವಣೆ: ನಾಮಪತ್ರ ಸಲ್ಲಿಕೆಯ ಭರಾಟೆ ಬಲು ಜೋರು

ಉಮೇದುವಾರಿಕೆಗೆ ಕೊನೆ ಕ್ಷಣದ ಗಡಿಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದೆ. 1,380 ಕ್ಷೇತ್ರಗಳಿಗೆ 3,500ಕ್ಕೂ ಅಧಿಕ ಉಮೇದುವಾರಿಕೆ ಸಲ್ಲಿಕೆಯಾಗಿದೆ.

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಹಾಗಾಗಿ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳ ಎದುರು ನಾಮಪತ್ರ ಸಲ್ಲಿಸುವವರ ಉದ್ದುದ್ದ ಸಾಲುಗಳು ಕಂಡುಬಂದವು. ಗುರುವಾರವೂ ಉಮೇದುವಾರರ ಸಂಖ್ಯೆ ಹೆಚ್ಚಿತ್ತು. ಒಂದೇ ದಿನ 1,572 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಗುರುವಾರ 258 ಕ್ಷೇತ್ರಗಳಿಗೆ ಒಂದೂ ಉಮೇದುವಾರಿಕೆ ಬಂದಿರಲಿಲ್ಲ. ಆ ಕ್ಷೇತ್ರಗಳೂ ಸೇರಿದಂತೆ ಇತರ ಕಡೆಗಳಲ್ಲಿ ಕೂಡ ಕೊನೆಯ ಕ್ಷಣದ ಗಡಿಬಿಡಿ ಗೋಚರಿಸಿತು.‌

ಕಾರವಾರದ ವಕೀಲರ ಸಂಘದ ಕಚೇರಿಯ ಬಳಿ ಶುಕ್ರವಾರ ಬೆಳಿಗ್ಗೆಯೇ ನೂರಾರು ಉಮೇದುವಾರರು ಅಫಿಡವಿಟ್ ಮಾಡಿಸಿಕೊಳ್ಳಲು ಕಾದು ನಿಂತಿದ್ದರು. ಬಳಿಕ ತಮ್ಮ ಗ್ರಾಮ ಪಂಚಾಯಿತಿಗಳಿಗೆ ತೆರಳಿ ದಾಖಲೆಗಳನ್ನು ಹಾಜರುಪಡಿಸಿದ್ದರು. ಹಾಗಾಗಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಶುಕ್ರವಾರ ಮತ್ತಷ್ಟು ಒತ್ತಡ ಏರ್ಪಡಿತ್ತು.

‘ಒಬ್ಬ ಅಭ್ಯರ್ಥಿಯ ನಾಮಮಪತ್ರದ ವಿವರಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲು ಸರಾಸರಿ 10 ನಿಮಿಷಗಳು ಬೇಕಾಗುತ್ತವೆ. 40 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ನಿಯಮದ ಪ್ರಕಾರ ಮಧ್ಯಾಹ್ನ ಮೂರು ಗಂಟೆಯ ಮೊದಲು ಬಂದ ಎಲ್ಲರಿಗೂ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆದರೆ, ಅವರ ಸರದಿ ಮುಗಿಯುವ ವೇಳೆಗೆ ರಾತ್ರಿ 10 ಗಂಟೆ ಆದರೂ ಅಚ್ಚರಿಯಿಲ್ಲ’ ಎಂದು ಮಾಜಾಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.