ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನವಾಸಿ: ಪುರಾತನ ರಥಕ್ಕೆ ಅಂತಿಮ ರಥೋತ್ಸವ

414 ವರ್ಷಗಳ ಕಾಲ ಉಮಾಮಧುಕೇಶ್ವರನ ಹೊತ್ತು ಸಾಗಿದ್ದ ರಥ
Last Updated 12 ಏಪ್ರಿಲ್ 2022, 16:15 IST
ಅಕ್ಷರ ಗಾತ್ರ

ಶಿರಸಿ: ಐತಿಹಾಸಿಕ ಕ್ಷೇತ್ರ ಬನವಾಸಿಯಲ್ಲಿ ಮಂಗಳವಾರ ಉಮಾಮಧುಕೇಶ್ವರ ದೇವರ ರಥೋತ್ಸವ ನಡೆಯಿತು. ಸೋದೆ ಅರಸರ ಕಾಲದಲ್ಲಿ ನಿರ್ಮಿಸಿದ್ದ ಮಹಾಸ್ಯಂದನ ರಥಕ್ಕೆ ಇದು ಅಂತಿಮ ರಥೋತ್ಸವ.

1609ರಲ್ಲಿ ಅಂದಿನ ಸೋದೆ ಅರಸರ ಮನೆತನದ ರಾಮಚಂದ್ರ ನಾಯಕ ಉಮಾಮಧುಕೇಶ್ವರ ದೇವರಿಗೆ ಮರದ ರಥವನ್ನು ಕಾಣಿಕೆಯಾಗಿ ನೀಡಿದ್ದರು. 413 ವರ್ಷಗಳ ಕಾಲ ನಿರಂತರವಾಗಿ ದೇವರ ಉತ್ಸವ ಮೂರ್ತಿಯನ್ನು ಇದೇ ರಥದಲ್ಲಿ ಕರೆದೊಯ್ಯಲಾಗುತ್ತಿತ್ತು. ನಾಲ್ಕು ಶತಮಾನಗಳ ಕಾಲ ರಥವನ್ನು ಸಂರಕ್ಷಿಸಿರುವುದು ದೇವಸ್ಥಾನದ ಹಿರಿಮೆಯಾಗಿದೆ.

‘ದೇವಸ್ಥಾನಕ್ಕೆ ನೂತನ ಮಹಾಸ್ಯಂದನ ರಥ ನಿರ್ಮಾಣಗೊಳ್ಳುತ್ತಿದ್ದು ಬರುವ ವರ್ಷದಿಂದ ಅದೇ ರಥವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈಗಿನ ರಥವನ್ನು ಕೆಡದಂತೆ ಸಂರಕ್ಷಣೆ ಮಾಡಲಾಗುವುದು’ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್ ತಿಳಿಸಿದರು.

ಪುರಾತನ ಮಹಾಸ್ಯಂದನ ರಥ ಉತ್ಸವದಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಉಮಾಮಧುಕೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ರಥಕ್ಕೆ ಹೂವಿನ ಹಾರಗಳಿಂದ ಅದ್ದೂರಿ ಅಲಂಕಾರ ಮಾಡಲಾಗಿತ್ತು. ಬನವಾಸಿ, ಅಕ್ಕಪಕ್ಕದ ಗ್ರಾಮಗಳ ರೈತರು ತಾವು ಬೆಳೆದ ಬೆಳೆಗಳನ್ನು ರಥಕ್ಕೆ ಕಟ್ಟುವ ಮೂಲಕ ಹರಕೆ ಸಮರ್ಪಿಸಿದ್ದರು.

ಏ.5ರಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. 11ರಂದು ಹೂವಿನ ರಥೋತ್ಸವ ನಡೆದಿತ್ತು. ಮಂಗಳವಾರ ಪಲ್ಲಕ್ಕಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ಕೊಂಡೊಯ್ದು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಭಕ್ತರು ಪಾಲ್ಗೊಂಡಿದ್ದರು.

ಅಂಗಡಿ ನೀಡದಂತೆ ಬಿಗಿಪಟ್ಟು:

ಬನವಾಸಿಯ ರಥೋತ್ಸವದಲ್ಲಿ ಹಿಂದೂಯೇತರ ಸಮುದಾಯದ ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಅವಕಾಶ ನೀಡದಂತೆ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬಿಗಿಪಟ್ಟು ಹಿಡಿದರು. ದೇವಸ್ಥಾನದ ಕಾರ್ಯಾಲಯಕ್ಕೆ ತೆರಳಿದ್ದ ಕಾರ್ಯಕರ್ತರು ವ್ಯವಸ್ಥಾಪನ ಸಮಿತಿ ಪ್ರಮುಖರಿಗೆ ಮನವಿ ಮಾಡಿದರು.

‘ಹಿಂದೂಯೇತರರಿಗೆ ಅಂಗಡಿ ನೀಡದಂತೆ ವ್ಯವಸ್ಥಾಪನ ಸಮಿತಿ ನಿರ್ಧರಿಸಿಲ್ಲ. ದೇವಸ್ಥಾನದ 100 ಮೀ. ಹೊರಗೆ ಯಾರಿಗೆ ಬೇಕಾದರೂ ಮಳಿಗೆ ನೀಡಲು ಅವಕಾಶವಿದೆ. ಆದರೆ ಹಿಂದೂ ವ್ಯಾಪಾರಿಗಳ ಹೊರತಾಗಿ ಬೇರೆಯವರು ಮಳಿಗೆಗೆ ಅವಕಾಶ ಕೇಳಲು ಬಂದಿಲ್ಲ’ ಎಂದು ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಪ್ರಕಾಶ ಬಂಗ್ಲೆ ತಿಳಿಸಿದರು. ಅಧ್ಯಕ್ಷ ರಾಜಶೇಖರ ಒಡೆಯರ್, ಮಾಜಿ ಅಧ್ಯಕ್ಷ ಟಿ.ಜಿ.ನಾಡಿಗೇರ್ ಇದ್ದರು.

ಗೋಪಾಲ ದೇವಾಡಿಗ, ಗಂಗಾಧರ ಹೆಗಡೆ, ವಿಠ್ಠಲ ಪೈ, ರುದ್ರ ಗೌಡ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT