ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ-2020: ಕೊರೊನಾ ಆತಂಕದಲ್ಲೇ ಕರಗಿದ ವರ್ಷ

ಜನಜೀವನ ತಲ್ಲಣಗೊಳಿಸಿದ ವೈರಸ್: ಬದುಕು ಹಳಿಗೇರಲು ಶ್ರಮಿಕರ ಪರದಾಟ
Last Updated 29 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಕಾರವಾರ: 2020ನೇ ಇಸವಿಯು ನೆನಪಿನ ಅಂಗಳಕ್ಕೆ ಇನ್ನೆರಡು ದಿನಗಳು ಮಾತ್ರ ಉಳಿದಿವೆ. ವರ್ಷದ ಬಹುಪಾಲು ಸಂಭ್ರಮಕ್ಕೆ ಕೊರೊನಾ ವೈರಸ್ ದಾಳಿ ಮಾಡಿ ನಾಶ ಮಾಡಿದೆ. ಹೊಸ ರೀತಿಯ ಜೀವನ ಶೈಲಿಯನ್ನು ಎಲ್ಲರೂ ಕಲಿತುಕೊಂಡಿದ್ದಾರೆ. 2021ರಲ್ಲಾದರೂ ಎಲ್ಲವೂ ಸಹಜ ಸ್ಥಿತಿಗೆ ಬಂದು ಬದುಕು ಮೊದಲಿನಂತಾಗಲಿ ಎಂಬ ಹಾರೈಕೆಯೊಂದಿಗೆ ವರ್ಷದ ಹಿನ್ನೋಟದ ಮೇಲೆ ಪಕ್ಷಿನೋಟ ಇಲ್ಲಿದೆ.

ಜಿಲ್ಲೆಯಲ್ಲಿ ಜನವರಿಯಿಂದಲೇ ಒಂದಿಲ್ಲೊಂದು ಆಘಾತಕಾರಿ, ಬೇಸರದ ಸುದ್ದಿಗಳು ಕೇಳಲು ಆರಂಭಿಸಿದವು. ಮಾರ್ಚ್‌ನಲ್ಲಿ ಕೋವಿಡ್ ಪ್ರಕರಣಗಳು ದೃಢಪಡಲು ಆರಂಭವಾದ ಬಳಿಕವಂತೂ ಎಲ್ಲವೂ ಸ್ಥಗಿತವಾಗಿ ಜನರು ತತ್ತರಿಸಿ ಹೋದರು.

ಶಿರಸಿಯ ಮಾರಿಕಾಂಬಾ ಜಾತ್ರೆಗೆ ಬಂದಿದ್ದ ವ್ಯಾಪಾರಿಗಳು, ಕಾರವಾರ, ಹೊನ್ನಾವರ, ಭಟ್ಕಳದ ಮೀನುಗಾರಿಕಾ ಬಂದರಿನಲ್ಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು, ಗೋಕರ್ಣಕ್ಕೆ ಬಂದಿದ್ದ ಸಾವಿರಾರು ಪ್ರವಾಸಿಗರು ಗಂಟುಮೂಟೆ ಕಟ್ಟಿಕೊಂಡು ತಮ್ಮ ಊರುಗಳಿಗೆ ಮರಳಿದರು. ಅತ್ತ ಮಹಾರಾಷ್ಟ್ರ, ಗೋವಾದಿಂದ ಅದೆಷ್ಟೋ ಮಂದಿ ಸಿಕ್ಕ ಸಿಕ್ಕ ವಾಹನಗಳಲ್ಲಿ, ಹೆದ್ದಾರಿ, ರೈಲು ಹಳಿಗಳ ಮೇಲೆ ನಡೆಯುತ್ತ ತಮ್ಮ ಮನೆ ಸೇರಿದರು. ಆಗ ಶುರುವಾದ ಕೊರೊನಾದ ಹಾವಳಿ ಇನ್ನೂ ಮುಂದುವರಿದಿದೆ.

14,225ಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 13,960ಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ. 75ರ ಆಸುಪಾಸಿನಲ್ಲಿ ಸಕ್ರಿಯ ಪ್ರಕರಣಗಳಿವೆ. 186 ಮಂದಿ ಕೋವಿಡ್‌ನಿಂದಾಗಿ ಜೀವ ಕಳೆದುಕೊಂಡಿದ್ದಾರೆ.

ಒಂದಷ್ಟು ಸಂತಸ:ಈ ಸಾಂಕ್ರಾಮಿಕ ಕಾಯಿಲೆಯ ನಡುವೆಯೂ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಸಂತಸದ, ಹೆಮ್ಮೆಯ ಸಂಗತಿಗಳು ನಡೆದವು. ಜಿಲ್ಲೆಯಲ್ಲಿ ‘ವೃಕ್ಷಮಾತೆ’ ಎಂದೇ ಪ್ರಸಿದ್ಧರಾಗಿರುವ ಅಂಕೋಲಾದ ಹೊನ್ನಳ್ಳಿಯ ತುಳಸಿ ಗೌಡ ಅವರು ‘ಪದ್ಮಶ್ರೀ’ ಪುರಸ್ಕೃತರಾದರು. ಸಹಕಾರ ಕ್ಷೇತ್ರದ ಸಾಧಕ ಯಲ್ಲಾಪುರದ ಎನ್.ಎಸ್.ಹೆಗಡೆ ಕುಂದರಗಿ ಅವರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಾರವಾರದ ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ಕಾಮಗಾರಿಯ ಭಾಗವಾಗಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣವನ್ನು ನಾಗರಿಕ ಸೇವೆಗೂ ಬಳಸಿಕೊಳ್ಳಲು ರಾಜ್ಯ ಸರ್ಕಾರ ಸಹಮತ ವ್ಯಕ್ತಪಡಿಸಿತು. ಇದಕ್ಕಾಗಿ ₹200 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿತು. ಜಿಲ್ಲೆಯ ಕರಾವಳಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ನೆರವಾಗುವ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರವು ಹೊನ್ನಾವರದ ಕಾಸರಕೋಡು ಕಡಲತೀರಕ್ಕೆ ದೊರೆಯಿತು.

ಜಿಲ್ಲೆಯ ಬುಡಕಟ್ಟು ಜನರ, ವನವಾಸಿಗಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಯಲ್ಲಾಪುರದ ಶಾಂತರಾಮ ಸಿದ್ದಿ ಅವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಿದ್ದು, ಜಿಲ್ಲೆಗೇ ಹೆಮ್ಮೆಯ ವಿಚಾರವಾಯಿತು. ಸಿದ್ದಿ ಸಮುದಾಯದ ಮುಖಂಡರೊಬ್ಬರು ಇದೇ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರಾದರು.

ಸಾಗರಮಾಲಾಕ್ಕೆ ವಿರೋಧ:ಈ ವರ್ಷದ ಆರಂಭದಲ್ಲೇ ಕಾರವಾರವು ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಯಿತು. ಸಾಗರಮಾಲಾ ಯೋಜನೆಯಡಿ ಇಲ್ಲಿನ ವಾಣಿಜ್ಯ ಬಂದರಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಆದರೆ, ಇದನ್ನು ವಿರೋಧಿಸಿ ಮೀನುಗಾರರು ಮತ್ತು ಸ್ಥಳೀಯರು ಜ. 12ರಿಂದ ಒಂದು ವಾರ ಪ್ರತಿಭಟನೆ, ಕಾರವಾರ ಬಂದ್ ಹಮ್ಮಿಕೊಂಡರು.

ಕಾಡಾನೆ ಹಾವಳಿ:ಜಿಲ್ಲೆಯ ಮುಂಡಗೋಡ, ಯಲ್ಲಾಪುರ ತಾಲ್ಲೂಕಿನ ವಿವಿಧೆಡೆ ಈ ವರ್ಷವೂ ಕಾಡಾನೆಗಳ ಹಾವಳಿಯಿಂದ ರೈತರು ಕಂಗೆಟ್ಟಿದ್ದಾರೆ. ಕಟಾವಿಗೆ ಬಂದಿದ್ದ ಭತ್ತ, ಬಾಳೆ, ಕಬ್ಬು, ಸಣ್ಣ ಅಡಿಕೆ ಸಸಿಗಳನ್ನು ತುಳಿದು ನಾಶ ಮಾಡಿವೆ. ಅವುಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ, ಸ್ಥಳೀಯರು ಕೈಗೊಂಡ ಕ್ರಮಗಳು ನಿರೀಕ್ಷಿತ ಫಲ ನೀಡದೇ ಶ್ರಮವೆಲ್ಲ ವ್ಯರ್ಥ ಎಂಬಂತಾಗಿರುವುದು ಚಿಂತೆಗೀಡು ಮಾಡಿದೆ.

ಪ್ರಮುಖ ಘಟನೆಗಳು (ಜನವರಿಯಿಂದ ಜೂನ್)

* ಜ. 11: ಕಾರವಾರದ ಕೂರ್ಮಗಡದಲ್ಲಿ ಜಾತ್ರೆ

* ಮಾ. 2: ಕಾರವಾರದಲ್ಲಿ ‘ಟುಪಲೇವ್’ ಯುದ್ಧ ವಿಮಾನ ಸ್ಥಾಪನೆಗೆ ಜಿಲ್ಲಾಡಳಿತ, ನೌಕಾನೆಲೆ ಒಪ್ಪಂದ

* ಮಾ. 24: ಕೊರೊನಾ ಹಾವಳಿ; ಜಿಲ್ಲೆಯಾದ್ಯಂತ ನಿಷೇಧಾಜ್ಞೆ

* ನಂತರ ಬಹುತೇಕ ಎಲ್ಲ ತಿಂಗಳಲ್ಲೂ ಕೊರೊನಾ ಕಾರಣದಿಂದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಯಿತು.

* ಜೂನ್ 4ರ ನಂತರ ಜಿಲ್ಲೆಯಲ್ಲಿ ಭಾರಿ ಮಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT