ಶುಕ್ರವಾರ, ಜುಲೈ 23, 2021
24 °C

ಮೂರು ಕಾಮಗಾರಿಗೆ ಪ್ಯಾಕೇಜ್ ಟೆಂಡರ್: ಮಾಧವ ನಾಯಕ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಗರದಲ್ಲಿ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ ಎನ್ನುವುದಕ್ಕೆ ದಾಖಲೆಯಿದೆ. ಶಾಸಕಿ ರೂಪಾಲಿ ನಾಯ್ಕ ಅವರ ಕಚೇರಿಯಿಂದಲೇ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಪತ್ರ ಬರೆಯಲಾಗಿದೆ. ಈ ಅಧಿಕಾರ ದುರುಪಯೋಗದ ಬಗ್ಗೆ ಬಿಜೆಪಿ ಮುಖಂಡರು ಹೇಗೆ ಸಮರ್ಥನೆ ಮಾಡುತ್ತಾರೆ’ ಎಂದು ಗುತ್ತಿಗೆದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾಧವ ನಾಯಕ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಲಾದೇವಿ ಮೈದಾನ ಅಭಿವೃದ್ಧಿ (₹5 ಕೋಟಿ), ಲೋಕೋಪಯೋಗಿ ಇಲಾಖೆಯ ವಿಭಾಗೀಯ ಕಚೇರಿ (₹4 ಕೋಟಿ) ಮತ್ತು ಪರಿವೀಕ್ಷಣಾ ಮಂದಿರದ (₹9.80 ಕೋಟಿ) ಕಾಮಗಾರಿಗಳನ್ನು ಒಗ್ಗೂಡಿಸಿ ಟೆಂಡರ್ ಕರೆಯಲು ಶಾಸಕಿ ಜೂನ್ 15ರಂದು ಸೂಚಿಸಿದ್ದಾರೆ’ ಎಂದು ಪತ್ರವನ್ನು ಪ್ರದರ್ಶಿಸಿದರು.

‘ಮೂರೂ ಕಾಮಗಾರಿಗಳನ್ನು ಒಗ್ಗೂಡಿಸಿ ₹18.80 ಕೋಟಿ ಮೊತ್ತವಾಗುತ್ತದೆ. ಇಷ್ಟು ದೊಡ್ಡ ಮೊತ್ತದ ಟೆಂಡರ್ ವಹಿಸಿಕೊಳ್ಳುವ ಗುತ್ತಿಗೆದಾರರು ಜಿಲ್ಲೆಯಲ್ಲಿ ಕಡಿಮೆ. ಹಾಗಾಗಿ ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುವ ಸಲುವಾಗಿ ಈ ರೀತಿ ಮಾಡಿದ್ದಾರೆ. ಇದು ಸ್ಥಳೀಯ ಗುತ್ತಿಗೆದಾರರಿಗೆ ಮತ್ತು ಸರ್ಕಾರಕ್ಕೆ ಮಾಡುವ ಮೋಸವಾಗಿದೆ’ ಎಂದು ಆರೋಪಿಸಿದರು.

‘ಇದರ ವಿರುದ್ಧ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ಗೆ ಗುತ್ತಿಗೆದಾರರು ಆಕ್ಷೇಪ ಸಲ್ಲಿಸಿದ್ದೇವೆ. ಇದನ್ನು ಆಧರಿಸಿ ಪ್ಯಾಕೇಜ್ ಟೆಂಡರ್ ರದ್ದಾಗುವ ಸಾಧ್ಯತೆಯಿದೆ’ ಎಂದರು.

‘ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಸಲುವಾಗಿ ಶಾಸಕಿಯವರನ್ನು ಸಂಪರ್ಕಿಸಲು ಹಲವು ಸಲ ಪ್ರಯತ್ನಿಸಿದ್ದೆವು. ಆದರೆ, ಅವರಾಗಲೀ ಅವರ ಆಪ್ತರಾಗಲೀ ಕರೆ ಸ್ವೀಕರಿಸಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ನಾನು ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ ಬಳಿಕ ಬಿಜೆಪಿ ವಕ್ತಾರ ನಾಗರಾಜ ನಾಯಕ ಅವರು, ನನ್ನ ಆರೋಪ ನಿರ್ಲಕ್ಷಿಸುವಂಥದ್ದು ಎಂದು ಹೇಳಿದ್ದಾರೆ. ಹಾಗಿದ್ದರೆ, ತನಿಖೆ ಆಗುವ ತನಕ ಕಾಯಬೇಕಿತ್ತು. ಈಗ ಅವರು ಸೂತ್ರವಿಲ್ಲದ ಗಾಳಿಪಟ ಹಾರಿಸುತ್ತಿದ್ದಾರೆ’ ಎಂದು ಹೇಳಿದರು.

ಪ್ರಮುಖರಾದ ಸಮೀರ ನಾಯ್ಕ, ಸಂತೋಷ ಸೈಲ್, ವಿಜಯ ಬಿಲಿಯೇ, ರೋಹಿದಾಸ್ ಕೊಠಾರಕರ್, ರಾಜೇಶ ಶೇಟ್, ಸಾಗರ್ ಕಲ್ಗುಟ್ಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.