ಸೋಮವಾರ, ಜನವರಿ 27, 2020
26 °C

ಕಾಳಿಯಲ್ಲಿ ಮರಳು ಗಣಿಗಾರಿಕೆ: ತಜ್ಞರ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆ ಮಾಡುವ ಸಾಧ್ಯತೆಯ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ತಜ್ಞರಿಂದ ಅಧ್ಯಯನ ಮಾಡಿಸಲಾಗಿದೆ. ಅವರ ವರದಿಯನ್ನು ಪರಿಸರ ಮತ್ತು ಅರಣ್ಯ ಸಚಿವಾಲಯವು ಪರಿಶೀಲಿಸಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಳಿ ನದಿಯಿಂದ ಮರಳು ತೆಗೆಯದ ಕಾರಣ ದೋಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ತಜ್ಞರಿಂದ ಅಧ್ಯಯನ ಮಾಡಿಸಲಾಗಿತ್ತು. ಸಚಿವಾಲಯದ ಮಾರ್ಗದರ್ಶನದಂತೆ ಜಿಲ್ಲಾಡಳಿತ ಮುಂದುವರಿಯಲಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಅನುಮತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಕಡಲತೀರ ನಿರ್ವಹಣಾ ವಲಯ ಸಮಿತಿಯ (ಸಿ.ಆರ್‌.ಝೆಡ್) ಅನುಮತಿ ಪಡೆದು ರಾಜ್ಯ ಸಮಿತಿಗೆ ಪ್ರಸ್ತಾವ ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗಳು ಮುಗಿದು 15 ದಿನಗಳಲ್ಲಿ ಅನುಮತಿ ಸಿಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಸಿ.ಆರ್‌.ಝೆಡ್ ರಾಜ್ಯ ಸಮಿತಿಯ ಸಭೆಯ ಬಳಿಕ ಸ್ಪಷ್ಟವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಶರಾವತಿ ನದಿಯ ಒಂದು ಭಾಗದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡದಂತೆ  ಸ್ಥಳೀಯರು  ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಸಿ.ಆರ್‌.ಝೆಡ್ ರಾಜ್ಯ ಸಮಿತಿಯ ನಿರ್ದೇಶನವನ್ನು ಅನುಸರಿಸಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಜಾತ್ರೆಗಳಲ್ಲಿ ಸುರಕ್ಷತೆ: ಜಿಲ್ಲೆಯಲ್ಲಿ ವಿವಿಧ ಜಾತ್ರೆಗಳು ಸಮೀಪಿಸುತ್ತಿವೆ. ಅಲ್ಲಿ ಅಗತ್ಯ ಮೂಲ ಸೌಕರ್ಯಗಳು, ಸುರಕ್ಷತೆಗೆ ಆದ್ಯತೆ ನೀಡಲು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸಭೆಗಳು ನಡೆದಿವೆ. ಕೂರ್ಮಗಡ ಜಾತ್ರೆಗೆ ತೆರಳುವ ದೋಣಿಗಳಿಗೆ ಕಡ್ಡಾಯವಾಗಿ ಅನುಮತಿ ಪಡೆದು, ಸುರಕ್ಷತಾ ಸಾಮಗ್ರಿ ಇರುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಮುಳುಗು ತಜ್ಞರೂ ಇರುವ ಮೀನುಗಾರರ ತಂಡವನ್ನು ಸಿದ್ಧವಾಗಿರುವಂತೆ ಮೀನುಗಾರಿಕೆ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು