ಶುಕ್ರವಾರ, ಜುಲೈ 1, 2022
21 °C
ಮಾರಿಕಾಂಬೆ ದೇವಸ್ಥಾನದಲ್ಲಿ ಮದುವೆಯ ಸಡಗರ

ಮಾರಿಕಾಂಬೆ ದೇವಸ್ಥಾನದಲ್ಲಿ ಮದುವೆಯ ಸಡಗರ: ಭಕ್ತಿಬಾಷ್ಪ ಹರಿಸಿದ ಕಲ್ಯಾಣೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಜಾತ್ರೆಯ ‌ಭಾಗವಾಗಿ ನಡೆಯುವ ಮಾರಿಕಾಂಬಾ ದೇವಿ ಕಲ್ಯಾಣೋತ್ಸವ ಮಂಗಳವಾರ ರಾತ್ರಿ 11.33ರ ಮುಹೂರ್ತಕ್ಕೆ ನೆರವೇರಿತು. ದೇವಸ್ಥಾನದ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರು ದೇವಿಯ ಕಲ್ಯಾಣವನ್ನು ಕಣ್ತುಂಬಿಕೊಂಡು ಪುಳಕಿತರಾದರು.

ಮಾರಿಕಾಂಬೆಯ ಜಾತ್ರೆ ಆಚರಣೆಯ ಹಿಂದೆ ಇರುವ ಜಾನಪದ ಕಥೆಯ ಭಾಗವಾಗಿ ಕಲ್ಯಾಣೋತ್ಸವ ಆಚರಣೆ ನಡೆಯುತ್ತದೆ ಎಂಬ ಪ್ರತೀತಿ ಇದೆ. ರಥ ಪೂಜೆ ಬಳಿಕ ಕಲ್ಯಾಣೋತ್ಸವ ಪ್ರಮುಖ ಧಾರ್ಮಿಕ ಆಚರಣೆ.

ದೇವಾಲಯದ ಸಭಾಮಂಟಪದಲ್ಲಿ ಸಂಜೆ ವೇಳೆಗೆ ಪ್ರತಿಷ್ಠಾಪಿಸಲಾದ ದೇವಿಯನ್ನು ಅರ್ಚಕರು ಅಲಂಕರಿಸಿದರು. ಧರ್ಮದರ್ಶಿ ಮಂಡಳದವರು, ಬಾಬುದಾರರು ಮಾರಿಕಾಂಬೆಯನ್ನು ವರಿಸುವ ನಾಡಿಗ ಕುಟುಂಬದ ಮನೆಗೆ ತೆರಳಿ ಅವರನ್ನು ಮೆರವಣಿಗೆಯಲ್ಲಿ ಕರೆತಂದರು.

ಬೀಗರ ಕುಟುಂಬ ದೇವಸ್ಥಾನಕ್ಕೆ ಬರುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ಕಲ್ಯಾಣೋತ್ಸವದ ವಿಧಿವಿಧಾನ ಪೂರೈಸಿದ ಬಳಿಕ ನಾಡಿಗ ಮನೆತನದ ವಿಜಯ ನಾಡಿಗ ದೇವಿಗೆ ಮಾಂಗಲ್ಯಧಾರಣೆ ಮಾಡಿದರು. ದೇವಿಯ ಸಹೋದರಿಯರಾದ ಮರ್ಕಿದುರ್ಗಿಯರಿಗೂ ಪೂಜೆ ಸಲ್ಲಿಸಲಾಯಿತು.

‘ಹೊರಬೀಡು ನಡೆಸಿ ದೇವಿ ಮೂರ್ತಿ ವಿಸರ್ಜಿಸಿದ ಬಳಿಕ ಕಲ್ಯಾಣೋತ್ಸವ ನಡೆಯಬೇಕು. ಆಗ ದೇವಿ ಮತ್ತಷ್ಟು ಕಾಂತಿವಂತಳಾಗುತ್ತಾಳೆ. ಜಾತ್ರೆಯ ಆಚರಣೆಯಲ್ಲಿ ಈ ಪ್ರಕ್ರಿಯೆಗೆ ಹೆಚ್ಚು ಮಹತ್ವವೂ ಇದೆ’ ಎಂದು ಅರ್ಚಕರೊಬ್ಬರು ವಿವರಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಲ್ಯಾಣೋತ್ಸವ ವೀಕ್ಷಿಸಿದರು. ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ, ಸದಸ್ಯರಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು