ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳತಾದ ಬಸ್‍ಗಳೇ ಅಧಿಕ: ಹೊಸ ಬಸ್ ನಿರೀಕ್ಷೆಯಲ್ಲಿ ಶಿರಸಿ ಸಾರಿಗೆ ವಿಭಾಗ

Last Updated 24 ಮೇ 2022, 19:30 IST
ಅಕ್ಷರ ಗಾತ್ರ

ಶಿರಸಿ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದಲ್ಲಿ 10 ಲಕ್ಷ ಕಿಲೋ ಮೀಟರ್‌ಗೂ ಹೆಚ್ಚು ದೂರ ಕ್ರಮಿಸಿದ 150ರಷ್ಟು ಬಸ್‍ಗಳಿವೆ. ಇವುಗಳ ಪೈಕಿ ಬಹುತೇಕ ಬಸ್‍ಗಳ ಚಾಲನಾ ಸಾಮರ್ಥ್ಯ ಕ್ಷೀಣಿಸಿದೆ.

ಹೊರ ರಾಜ್ಯಗಳಿಗೂ ಸೇರಿದಂತೆ ಪ್ರತಿನಿತ್ಯ 475 ಮಾರ್ಗಗಳಿಗೆ ಶಿರಸಿ ವಿಭಾಗದಲ್ಲಿ ಬಸ್ ಸಂಚಾರ ನಡೆಸಬೇಕಾಗಿದೆ. ಪ್ರಸ್ತುತ 535 ಬಸ್‍ಗಳು ವಿಭಾಗದ ವಿವಿಧ ಸಾರಿಗೆ ಘಟಕಗಳಲ್ಲಿವೆ. ಹೊಸ ಬಸ್ ಖರೀದಿ ನಡೆಯದೆ ಹಲವು ವರ್ಷಗಳು ಕಳೆದ ಪರಿಣಾಮ ಹಳತಾದ ಬಸ್‍ಗಳಿಂದಲೇ ಕಾರ್ಯಾಚರಣೆ ನಡೆಸುವ ಅನಿವಾರ್ಯತೆ ಎದುರಾಗಿದೆ.

ಗುಡ್ಡಗಾಡು ಜಿಲ್ಲೆ ಎಂಬ ಹಣೆ‍ಪಟ್ಟಿ ಹೊತ್ತಿರುವ ಉತ್ತರ ಕನ್ನಡದಲ್ಲಿ ಹಲವು ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರ ದುಸ್ಥರವಾಗುತ್ತಿದೆ. ಹಳ್ಳಿ ರಸ್ತೆಗೆ ಸಂಚರಿಸುವ ಬಸ್‍ಗಳು ಮಾರ್ಗಮಧ್ಯದಲ್ಲೇ ಕೆಟ್ಟು ನಿಲ್ಲುವ ಪ್ರಸಂಗವೂ ಹೆಚ್ಚುತ್ತಿದೆ. ಇದರಿಂದ ಬಸ್‍ಗಳ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತಿದೆ.

‘ನಿಯಮದ ಪ್ರಕಾರ ಗರಿಷ್ಠ 10 ಲಕ್ಷ ಕಿ.ಮೀ ಸಂಚರಿಸಿದ ಬಳಿಕ ಬಸ್‍ನ ಕಾರ್ಯಾಚರಣೆ ಅವಧಿ ಮುಕ್ತಾಯಗೊಳ್ಳಬೇಕು. ಅವುಗಳ ಬಿಡಿಭಾಗಗಳು, ಎಂಜಿನ್‍ಗಳಲ್ಲಿ ಪದೇ ಪದೇ ದೋಷ ಕಾಣಿಸಿಕೊಳ್ಳುತ್ತದೆ. ಅವುಗಳನ್ನು ದೂರದ ಮಾರ್ಗಗಳಿಗೆ ಚಲಾಯಿಸಿಕೊಂಡು ಹೋಗುವುದು ಸವಾಲಾಗುತ್ತದೆ. ಬಸ್‍ಗಳ ಕೊರತೆಯಿಂದ ಅವುಗಳನ್ನು ಬಳಸುವ ಅನಿವಾರ್ಯತೆ ಇದೆ’ ಎಂದು ಹಿರಿಯ ಚಾಲಕರೊಬ್ಬರು ಸಮಸ್ಯೆ ವಿವರಿಸಿದರು.

‘ಹೆಚ್ಚು ದೂರ ಕ್ರಮಿಸಿದ್ದರೂ ನಿಗದಿತ ಸಮಯದಲ್ಲಿ ಎಂಜಿನ್ ನಿರ್ವಹಣೆ ಮಾಡಿಸಿದರೆ ಬಸ್‍ಗಳು ಮತ್ತಷ್ಟು ವರ್ಷ ಕಾರ್ಯನಿರ್ವಹಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತವೆ. ಶಿರಸಿ ವಿಭಾಗದಲ್ಲಿ ಹೆಚ್ಚು ದೂರ ಕ್ರಮಿಸಿದ್ದರೂ ಇನ್ನೂ ಚಾಲನಾ ಸಾಮರ್ಥ್ಯ ಹೊಂದಿರುವ ಬಸ್‍ಗಳ ಸಂಖ್ಯೆ ಸಾಕಷ್ಟಿದೆ’ ಎಂದು ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎ.ರಾಜಕುಮಾರ್ ತಿಳಿಸಿದರು.

ಹಳ್ಳಿಗಳಲ್ಲಿ ಬಸ್ ಸಮಸ್ಯೆ:ಶಿರಸಿ, ಸಿದ್ದಾಪುರ ತಾಲ್ಲೂಕುಗಳ ಹಲವು ಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಶಾಲಾ, ಕಾಲೇಜುಗಳು ಆರಂಭಗೊಂಡಿದ್ದು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ.

‘ಬಸ್‍ಗಳು ಅಗತ್ಯದಷ್ಟಿದ್ದರೂ ಅವುಗಳ ಕಾರ್ಯಾಚರಣೆಗೆ ಚಾಲಕ, ನಿರ್ವಾಹಕರ ಕೊರತೆ ಎದುರಾಗಿದೆ. ವಿಭಾಗದ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಚಾಲಕರ ಕೊರತೆ ಉಂಟಾಗಿದೆ. ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಗ್ರಾಮೀಣ ಭಾಗಕ್ಕೆ ತೊಂದರೆ ಆಗದಂತೆ ಕೆಲವು ದೂರದ ಮಾರ್ಗಗಳಿಗೆ ಸಂಚರಿಸುವ ಬಸ್‍ಗಳ ವೇಳಾಪಟ್ಟಿಯನ್ನೇ ರದ್ದುಪಡಿಸಿದ್ದೇವೆ’ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಶಿರಸಿ ವಿಭಾಗಕ್ಕೆ ಹೊಸ ಬಸ್ ನೀಡುವಂತೆ ಪ್ರಸ್ತಾವ ಸಲ್ಲಿಕೆಯಾಗಿದೆ. ಈಚೆಗೆ ಸಾರಿಗೆ ಸಚಿವರು 150 ಹೊಸ ಬಸ್ ನೀಡುವ ಭರವಸೆಯನ್ನು ನೀಡಿದ್ದಾರೆ.

- ಎ.ರಾಜಕುಮಾರ್,ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಅಂಕಿ–ಅಂಶ

535

ಒಟ್ಟು ಬಸ್‌ಗಳ ಸಂಖ್ಯೆ

475

ಬಸ್ ಮಾರ್ಗಗಳು

150

10 ಲಕ್ಷ ಕಿ.ಮೀ. ಸಂಚರಿಸಿದ ಬಸ್‍ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT