ಶನಿವಾರ, ನವೆಂಬರ್ 23, 2019
22 °C
ಹಳಿಯಾಳ ಎಪಿಎಂಸಿ ಪ್ರಾಂಗಣದಲ್ಲಿ ಬೆಳೆ ಒಣಗಿಸುತ್ತಿರುವ ರೈತರು

ಗೋವಿನ ಜೋಳದ ಬೆಳೆಗೆ ಮಳೆಯ ರಗಳೆ

Published:
Updated:
Prajavani

ಹಳಿಯಾಳ: ಬಿತ್ತನೆ ಮಾಡುವ ಸಮಯದಲ್ಲಿ ವಿಪರೀತ ಮಳೆಯ ಕಾಟ. ಬೆಳೆ ಕೈಗೆ ಬಂದು ಮಾರುಕಟ್ಟೆಗೆ ತಂದಾಗಲೂ ಕಾಡುತ್ತಿರುವ ವರ್ಷಧಾರೆ. ಇದರಿಂದ ಬೆಳೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಹೈರಾಣಾಗಿದ್ದಾರೆ.

ಇದು ತಾಲ್ಲೂಕಿನಲ್ಲಿ ಈ ಬಾರಿ ಗೋವಿನ ಜೋಳ ಬೆಳೆದ ರೈತರ ಪಾಡು. ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಾಟಕ್ಕೆ ತಂದ ಬೆಳೆಯನ್ನು ಅಲ್ಲೇ ಹರಡಿ ಒಣಗಿಸುತ್ತಿದ್ದಾರೆ. 

ಈ ವರ್ಷ ಗೋವಿನ ಜೋಳದ ಸಸಿಗಳು ಉತ್ತಮವಾಗಿ ಬೆಳೆದಿವೆ. ಇಳುವರಿ ಕೂಡ ಚೆನ್ನಾಗಿ ಬಂದಿದೆ. ಆದರೆ, ಆಗಸ್ಟ್ ಮೊದಲ ವಾರದ ಮಳೆಯಿಂದ ಬೆಳೆಗೆ ಹಾನಿಯಾಗಿದೆ. ಅಳಿದುಳಿದ ಬೆಳೆಯನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಶುಚಿಗೊಳಿಸಿ ಮಾರಾಟಕ್ಕೆ ತರಲು ರೈತರು ಅಣಿಯಾಗಿದ್ದರು. ಅಷ್ಟರಲ್ಲಿ  ಮತ್ತೆ ಮಳೆ ಶುರುವಾಗಿ ಫಸಲು ನೀರಿನಲ್ಲಿ ನೆನೆಯಿತು. ಹಾಗಾಗಿ ರೈತರು ಮತ್ತೆ ಬೆಳೆ ಒಣಗಿಸಬೇಕಾಗಿದೆ.

ತಾಲ್ಲೂಕಿನಲ್ಲಿ ಈ ವರ್ಷ ಗೋವಿನ ಜೋಳ ಬೆಳೆಯಲು 4,000 ಹೆಕ್ಟೇರ್ ಗುರಿ ನಿಗದಿಯಾಗಿದೆ. ಆದರೆ, ಒಟ್ಟೂ 4,972 ಹೆಕ್ಟೇರ್ ಬೆಳೆಯಲಾಗಿದೆ. ಕಳೆದ ವರ್ಷ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ 3.48 ಲಕ್ಷ ಕ್ವಿಂಟಲ್ ಗೋವಿನ ಜೋಳ ಮಾರಾಟಕ್ಕೆ ಬಂದಿತ್ತು. ಸುಮಾರು ₹ 47.17 ಕೋಟಿ ವಹಿವಾಟಾಗಿತ್ತು. ಎಪಿಎಂಸಿಗೆ ಮಾರುಕಟ್ಟೆ ಶುಲ್ಕ ₹ 70.75 ಲಕ್ಷ ಪಾವತಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿದಾರರು ಬೀಡುಬಿಟ್ಟಿದ್ದಾರೆ. ಟೆಂಡರ್‌ಗಳ ಮೂಲಕ ಪ್ರತಿ ಕ್ವಿಂಟಲ್‌ಗೆ ₹ 2,000ದಿಂದ ₹ 2,200 ನಿಗದಿಯಾಗಿದೆ. ಕಳೆದ ವರ್ಷ ಗೋವಿನ ಜೋಳದ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,200ರಿಂದ ₹ 1,500 ಇತ್ತು. ಈವರಗೆ ಮಾರುಕಟ್ಟೆಯಲ್ಲಿ ಸುಮಾರು 2,186 ಕ್ವಿಂಟಲ್ ಮಾತ್ರ ಮಾರಾಟವಾಗಿದೆ.

ಸರಾಗವಾಗಿ ಹರಿಯದ ನೀರು: ಎಪಿಎಂಸಿ ಪ್ರಾಂಗಣದಲ್ಲಿ ಗೋವಿನಜೋಳವನ್ನು ತಾಡಪತ್ರಿ ಮುಚ್ಚಿದರೂ ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಬಿದ್ದ ಮಳೆಗೆ ಪ್ರಾಂಗಣದಲ್ಲಿರುವ ಕಾಲುವೆಗಳಲ್ಲಿ ಕೆಸರು ತುಂಬಿಕೊಂಡಿದೆ. ಹಾಗಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಒಣಗಿಸಲು ಹಾಕಿದ ಬೆಳೆಗೆ ಹಾನಿಯಾಗುತ್ತಿದೆ ಎಂದು ರೈತರಾದ ಗಣಪತಿ ಕರಂಜೇಕರ, ಶಿವಾಜಿ ನಾಕಾಡಿ ಅಳಲು ತೋಡಿಕೊಂಡರು. 

ಎಪಿಎಂಸಿ ಪ್ರಾಂಗಣದಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಜ್ ದುರಸ್ತಿಯಲ್ಲಿದೆ. ಹಾಗಾಗಿ ಜೋಳವನ್ನು ತೂಕ ಮಾಡಲು ರೈತರು ಬೇರೆ ಕಡೆ ಹೋಗಬೇಕಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)