ಯಲ್ಲಾಪುರ: ಮಳೆ ಮತ್ತು ನೆರೆ ಹಾವಳಿಯಿಂದ ಆದ ಹಾನಿಯ ಬಗ್ಗೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇತರ ವಿವಿಧ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳು ಭಾನುವಾರ ಸ್ಥಳ ಪರಿಶೀಲನೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕೂಡ ಜೊತೆಗಿದ್ದು, ಸಭೆ ನಡೆಸಿದರು.
ಶನಿವಾರ ರಾತ್ರಿ ಉಪ ಮುಖ್ಯಮಂತ್ರಿ ಗೊವಿಂದ ಕಾರಜೋಳ ಜೊತೆ ಸಚಿವ ಶಿವರಾಮ ಹೆಬ್ಬಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇದಕ್ಕೆ ಸ್ಪಂದಿಸಿದ ಗೋವಿಂದ ಕಾರಜೋಳ ಅವರು, ಯಲ್ಲಾಪುರಕ್ಕೆ ಹಿರಿಯ ಅಧಿಕಾರಿಗಳ ತಂಡವನ್ನು ಕಳಿಸಿದ್ದರು. ಭಾನುವಾರ ಮುಂಜಾನೆಯೇ ಬೆಂಗಳೂರಿನಿಂದ ಬಂದ ಅಧಿಕಾರಿಗಳು, ಸಚಿವ ಹೆಬ್ಬಾರ ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಯಲ್ಲಾಪುರ– ಅಂಕೋಲಾ ತಾಲ್ಲೂಕುಗಳಲ್ಲಿ ಅತ್ಯಂತ ಹೆಚ್ಚು ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಕುಸಿದು ಹೋಗಿದೆ. ಬಂಕಾಪುರ- ಮಲ್ಲಾಪುರ ರಾಜ್ಯ ಹೆದ್ದಾರಿ ತಳಕೆಬೈಲ್ ಸಂಪೂರ್ಣವಾಗಿ ಕುಸಿದಿದೆ. ಹೆಗ್ಗಾರ– ಕಲ್ಲೇಶ್ವರ ಸಂಪರ್ಕಿಸುವ ಗುಳ್ಳಾಪುರದ ಸೇತುವೆಯ ಅರ್ಧಭಾಗ ನೀರಿನಲ್ಲಿ ಕೊಚ್ಚಿ ಹೋಗಿದೆ. ಜಿಲ್ಲೆಯ ಪ್ರಮುಖ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುವಂತೆ ಸಚಿವರು ಸೂಚಿಸಿದರು. ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಶೀಘ್ರವೇ ಒದಗಿಸುವುದಾಗಿ ಭರವಸೆ ನೀಡಿದರು.
ದುರಸ್ತಿಗೆ ವಿಳಂಬವಾದರೆ ಸಂಪರ್ಕಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲು ಇರುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆ ನಡೆಸಲೂ ಸೂಚಿಸಿದರು. ಈ ಬಗ್ಗೆ ಯೋಜನೆ ರೂಪಿಸಲು ಸುಮಾರು ಒಂದು ವಾರದ ಅವಧಿ ಬೇಕಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಎಸ್.ಎಫ್.ಪಾಟೀಲ, ಧಾರವಾಡದ ಉತ್ತರ ವಿಭಾಗದ ಮುಖ್ಯ ಎಂಜಿನಿಯರ್ ಶಿವಾನಂದ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಪ‍್ರಾಧಿಕಾರದ ಮುಖ್ಯ ಎಂಜಿನಿಯರ್ ಗೋವಿಂದರಾಜು, ಶಿರಸಿ ಎ.ಇ.ಇ ಕೃಷ್ಣ ರೆಡ್ಡಿ, ಧಾರವಾಡ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ದೇವಿದಾಸ ಚೌಹಾಣ, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ ಇದ್ದರು. ನಂತರ ಎಲ್ಲರೂ ಗುಳ್ಳಾಪುರ ಸೇತುವೆ, ಅರಬೈಲ್ ಘಟ್ಟದ ರಸ್ತೆ ಹಾಗೂ ಕಳಚೆ– ತಳಕೆಬೈಲ್ ಭೂಕುಸಿತದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.