ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಅಕಾಲಿಕ ಮಳೆ, ಭತ್ತದ ಹಾನಿಯೇ ₹ 1.21 ಕೋಟಿ

1,784 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
Last Updated 9 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಈ ವರ್ಷ ಅಕಾಲಿಕ ಮಳೆಯಿಂದ ಭತ್ತದ ಕೃಷಿಯೊಂದಕ್ಕೇ ಆಗಿರುವ ಹಾನಿಯು ಈವರೆಗಿನ ಅಂದಾಜಿನ ಪ್ರಕಾರ ₹ 1.21 ಕೋಟಿ. 1,784 ಹೆಕ್ಟೇರ್ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಹಾಗೂ ಕಟಾವು ಮಾಡಿದ್ದ ಪೈರು ನೀರಿನಲ್ಲಿ ನೆನೆದು ಹೋಗಿದೆ.

ಭತ್ತಕ್ಕೆ ಆಗಿರುವ ಹಾನಿಯು ಗುಣಮಟ್ಟದ ಅಕ್ಕಿ ಪೂರೈಕೆಯ ಮೇಲೆ ಭಾರಿ ಸಮಸ್ಯೆ ಉಂಟು ಮಾಡುವ ಸಾಧ್ಯತೆಯಿದೆ. ಮೊಳಕೆಯೊಡೆದ ಭತ್ತದ ಕಾಳನ್ನು ಯಾರೂ ಖರೀದಿಸುವುದಿಲ್ಲ. ಮಳೆಯಲ್ಲಿ ಒಂದು ವಾರ ನೆನೆದು ಕಾಳು ಕಪ್ಪಾಗಿದ್ದರೂ ಮಾರುಕಟ್ಟೆಯಲ್ಲಿಕೇಳುವವರು ಇರುವುದಿಲ್ಲ. ಹೀಗಾಗಿ ಅಳಿದು ಉಳಿದಿರುವ ಪೈರಿನಲ್ಲಿ ಚೆನ್ನಾಗಿರುವುದನ್ನು ಹೆಕ್ಕಿ ತೆಗೆದು ಪ್ರತ್ಯೇಕಿಸುವಂಥ ಸ್ಥಿತಿ ಉಂಟಾಗಿದೆ.

ಮಳೆಯಿಂದ ಆಗಿರುವ ಹಾನಿಯು ಕೇವಲ ಅಕ್ಕಿ ತಯಾರಿಕೆಯ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಅಕ್ಕಿಯಿಂದ ತಯಾರಿಸುವ ಅವಲಕ್ಕಿ, ಅಕ್ಕಿಹಿಟ್ಟು ಮುಂತಾದ ಉಪ ಉತ್ಪನ್ನಗಳನ್ನು ಸಿದ್ಧಪಡಿಸುವಲ್ಲೂ ಸಮಸ್ಯೆ ಉಂಟುಮಾಡಿದೆ.

‘ಅವಲಕ್ಕಿ ತಯಾರಿಸಲು ಚೆನ್ನಾಗಿರುವ ಅಕ್ಕಿ ಬೇಕು. ಇಲ್ಲದಿದ್ದರೆ ಅವಲಕ್ಕಿ ಸ್ವಲ್ಪ ದಿನಕ್ಕೇ ವಾಸನೆ ಬರುತ್ತದೆ. ಅಲ್ಲದೇ ಕಹಿಯಾಗುತ್ತದೆ. ರೈತರು ಅಕ್ಕಿ ಮಾರಾಟಕ್ಕೆ ಮುಂದೆ ಬಂದರೂ ನಾವು ಖರೀದಿಸುವಾಗ ಬಹಳ ಪರಿಶೀಲನೆ ಮಾಡಲೇಬೇಕಾಗಿದೆ’ ಎನ್ನುತ್ತಾರೆ ಗೋಕರ್ಣದ ರಾಮನಾಥ ಪೋಹಾ ಮಿಲ್‌ ಮಾಲೀಕ ಗೋಪಿನಾಥ ದತ್ತ ಶಾನುಭಾಗ.

‌‘ಈ ವರ್ಷ ಬೆಳೆಯ ಗುಣಮಟ್ಟ ಹೇಗಿದೆ ಎಂದು ಗೊತ್ತಾಗುತ್ತಿಲ್ಲ. ರೈತರೆಲ್ಲ ಇನ್ನೂ ಫಸಲನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದಾರೆ. ಕೆಲವರು ಪೈರನ್ನು ರಾಶಿ ಹಾಕಿ ಸಂರಕ್ಷಿಸಿದ್ದಾರೆ. ಹಾಗಾಗಿ ಸ್ವಲ್ಪ ದಿನ ಕಳೆದ ಬಳಿಕವೇ ಗುಣಮಟ್ಟ ಹೇಗಿದೆ ಎಂದು ಗೊತ್ತಾಗಬಹುದು’ ಎಂದು ಅವರು ಹೇಳುತ್ತಾರೆ.

ರೈತರು ನಷ್ಟ ಕಡಿಮೆ ಮಾಡಿಕೊಳ್ಳಲು ಅವಲಕ್ಕಿ ಗಿರಣಿಗಳಿಗೆ ಅಕ್ಕಿ ಮಾರಾಟ ಮಾಡಿದರೂ ಅದು ಕಡಿಮೆ ಪ್ರಮಾಣದಲ್ಲಿರುತ್ತದೆ. ಒಂದೆಡೆ ಮಳೆಯಿಂದ ಆಗಿರುವ ಬೆಳೆ ಹಾನಿ, ಮತ್ತೊಂದೆಡೆ ನೀರಿನಲ್ಲಿ ಮುಳುಗಿದ್ದ ಪೈರನ್ನು ಹಾಗೂ ಕಾಳನ್ನು ಹೆಕ್ಕಿ ತೆಗೆಯುವ ಶ್ರಮ. ಈ ಕೆಲಸಕ್ಕೆ ಬಂದ ಕೂಲಿಯಾಳುಗಳ ವೇತನಕ್ಕೆ ಸಾವಿರಾರು ರೂಪಾಯಿ ವ್ಯಯಿಸುವ ಅನಿವಾರ್ಯ ರೈತರದ್ದಾಗಿದೆ.

‘ಅವಲಕ್ಕಿಗೂ ಬಳಕೆಯಾಗದು’: ‘ಬೆಳೆದ ಭತ್ತದ ಪೈರು ಶೇ 25ರಷ್ಟು ಒದ್ದೆಯಾದರೂ ಹಾಳಾಗುತ್ತದೆ. ಅದು ಅಕ್ಕಿ ಮಾತ್ರವಲ್ಲ ಅವಲಕ್ಕಿಗೂ ಬಳಕೆಯಾಗುವುದಿಲ್ಲ. ಈ ವರ್ಷ ಅದೇ ದೊಡ್ಡ ತಲೆಬಿಸಿಯಾಗಿದೆ. ಹಾಕಿದ್ದ ಶ್ರಮವೆಲ್ಲ ಒಟ್ಟೂ ವ್ಯರ್ಥವಾಗಿದೆ’ ಎಂದು ಕುಮಟಾ ತಾಲ್ಲೂಕಿನ ಹೊಲನಗದ್ದೆಯ ರೈತ ನಾಗೇಶ ನಾಯ್ಕ ಬೇಸರ ವ್ಯಕ್ತಪಡಿಸುತ್ತಾರೆ.

‘ಅವಲಕ್ಕಿ ಮಾಡಲು ದೊಡ್ಡ ಭತ್ತವನ್ನೇ ಬಳಸಲಾಗುತ್ತದೆ. ಜಯಾ ತಳಿ ಅದಕ್ಕೆ ಸೂಕ್ತವಾಗಿದೆ. ಕುಮಟಾ ಸುತ್ತಮುತ್ತ ಅದನ್ನೇ ಹೆಚ್ಚು ಬೆಳೆಯಲಾಗುತ್ತದೆ. ಎಲ್ಲ ರೈತರದ್ದೂ ಒಂದೇ ರೀತಿಯ ಸಮಸ್ಯೆಯಾಗಿದೆ’ ಎಂದು ಹೇಳುತ್ತಾರೆ.

ನಾಗೇಶ ಅವರು ಕಳೆದ ವರ್ಷ ಒಂದೆರಡು ಕ್ವಿಂಟಲ್ ಭತ್ತ ಸಂಗ್ರಹಿಸಿದ್ದರು. ಆದರೆ, ಈ ವರ್ಷ ಅದಕ್ಕೂ ಸಿಗಲಿಕ್ಕಿಲ್ಲ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT