ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಿಗೆ ಸಿದ್ಧವಾದ ರಾಂಪತ್ರೆ ಸಸಿ

15 ಸಾವಿರ ಗಿಡ ಬೆಳೆಸಿದ ಶಿರಸಿ ಅರಣ್ಯ ವಿಭಾಗ
Last Updated 6 ಜೂನ್ 2022, 12:53 IST
ಅಕ್ಷರ ಗಾತ್ರ

ಶಿರಸಿ: ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಸಸ್ಯ ಸಂಕುಲ ರಾಂಪತ್ರೆಯನ್ನು ಶಿರಸಿ ಉಪವಿಭಾಗದ ನರಸ್ರಿಗಳಲ್ಲಿ ಇದೇ ಮೊದಲ ಬಾರಿಗೆ ವ್ಯಾ‍ಪಕ ಪ್ರಮಾಣದಲ್ಲಿ ಬೆಳೆಸಲಾಗಿದೆ. ಇವುಗಳನ್ನು ನೆಡಲು ಶಿರಸಿ, ಸಿದ್ದಾಪುರ ತಾಲ್ಲೂಕಿನ ನೂರಕ್ಕೂ ಹೆಚ್ಚು ಪ್ರದೇಶ ಗುರುತಿಸಲಾಗಿದೆ.

ತಾಲ್ಲೂಕಿನ ಕೆಂಗ್ರೆ, ಚಿಪಗಿಯಲ್ಲಿರುವ ನರ್ಸರಿಗಳಲ್ಲಿ 15 ಸಾವಿರದಷ್ಟು ರಾಂಪತ್ರೆ ಗಿಡ (ಮೈರಿಸ್ಟಿಕಾ ಸ್ವ್ಯಾಂಪ್) ಬೆಳೆಸಲಾಗಿದೆ. ಜೌಗು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುವ ಈ ಜಾತಿಯ ಸಸ್ಯಗಳನ್ನು ಅವುಗಳ ಬೆಳವಣಿಗೆಗೆ ಅನುಕೂಲವಾಗುವ ಸ್ಥಳದಲ್ಲೇ ನೆಟ್ಟು ಪೋಷಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

‘ಉಪ ವಿಭಾಗ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ನಾಟಿ ಮಾಡಲು ಹಾಗೂ ರೈತರಿಗೆ, ಸಂಘ–ಸಂಸ್ಥೆಗಳಿಗೆ ವಿತರಿಸಲು 106 ವೈವಿಧ್ಯದ 15 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿದ್ದೇವೆ. ಪ್ರತಿ ವರ್ಷ ರಾಂಪತ್ರೆ ಗಿಡಗಳನ್ನು ಕೆಲವೇ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿತ್ತು. ಈ ಬಾರಿ ಪ್ರಮಾಣ ಹೆಚ್ಚಿಸಲಾಗಿದೆ. ಇವುಗಳ ನಾಟಿಗೆ ಪರಿಸರ ತಜ್ಞರ ಜತೆ ಸಮಾಲೋಚಿಸಿ ಜಾಗವನ್ನೂ ಅಂತಿಮಗೊಳಿಸಲಾಗಿದೆ’ ಎನ್ನುತ್ತಾರೆ ಶಿರಸಿ ಡಿಸಿಎಫ್ ಆರ್. ಅಜ್ಜಯ್ಯ.

‘ಅಳಿವಿನಂಚಿನಲ್ಲಿರುವ ಕದಂಬ, ಏಕನಾಯಕ, ಅಶೋಕ ಸೇರಿದಂತೆ ಹಲವು ಬಗೆಯ ಸಸ್ಯಗಳು, ಬೀಟೆ, ಹೊನ್ನೆ, ಮತ್ತಿ, ನಂದಿ ಮುಂತಾದ ಸಸಿಗಳನ್ನು ಹೆಚ್ಚು ಬೆಳೆಸಿದ್ದೇವೆ. 7 ಲಕ್ಷದಷ್ಟು ಅಕೇಶಿಯಾ ಸಸಿಗಳು ನರ್ಸರಿಗಳಲ್ಲಿವೆ’ ಎಂದರು.

ಸೋಮವಾರ ತಾಲ್ಲೂಕಿನ ಕೆಂಗ್ರೆ, ಚಿಪಗಿ, ಬನವಾಸಿ ಅರಣ್ಯ ವಲಯದ ನರ್ಸರಿಗಳಲ್ಲಿ ಬೀಜೋತ್ಸವ ಕಾರ್ಯಕ್ರಮವೂ ನಡೆಯಿತು. ಎಸಿಎಫ್‍ಗಳಾದ ಡಿ.ರಘು, ಅಶೋಕ ಹಲಗೂರ, ಪ್ರಭಾರ ಐ.ಎಫ್.ಎಸ್. ಅಧಿಕಾರಿ ಯೋಗೀಶ್, ಆರ್.ಎಫ್.ಓ.ಗಳಾದ ಬಸವರಾಜ ಬೋಚಳ್ಳಿ, ಮಂಜುನಾಥ ಹೆಬ್ಬಾರ, ಉಷಾ ಕಬ್ಬೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT