ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಸಾಗಣೆ: ಹೆದ್ದಾರಿ ದೂಳುಮಯ

ನೌಕಾನೆಲೆಯ ಕಾಮಗಾರಿಗೆ ನಿರಂತರವಾಗಿ ಲಾರಿಗಳ ಸಂಚಾರ
Last Updated 4 ಮೇ 2021, 14:25 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಅಮದಳ್ಳಿಯಲ್ಲಿ ನಿತ್ಯವೂ ಹತ್ತಾರು ಟಿಪ್ಪರ್ ಲಾರಿಗಳಲ್ಲಿ ಕೆಂಪು ಮಣ್ಣನ್ನು ಸಾಗಿಸಲಾಗುತ್ತಿದೆ. ಆದರೆ, ಮಣ್ಣಿಗೆ ಯಾವುದೇ ಮುಚ್ಚಿಗೆ ವ್ಯವಸ್ಥೆ ಮಾಡದ ಕಾರಣ ಹೆದ್ದಾರಿಯುದ್ದಕ್ಕೂ ಚೆಲ್ಲುತ್ತಿದ್ದು, ಹೆದ್ದಾರಿಯುದ್ದಕ್ಕೂ ದೂಳುಮಯವಾಗಿದೆ ಎಂದು ವೀರಗಣಪತಿ ಸಂಸ್ಥಾ‍ನದ ಉಪಾಧ್ಯಕ್ಷ ರವೀಂದ್ರ ಅಮದಳ್ಳಿ ದೂರಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ಈ ರೀತಿಯ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸೀಬರ್ಡ್ ನೌಕಾನೆಲೆಯವರು ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶದಲ್ಲಿ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಯವರು ಮಣ್ಣನ್ನು ತುಂಬುತ್ತಿದ್ದಾರೆ. ಇದಕ್ಕೆ ಬೇರೆ ಕಡೆಯಿಂದ ಹೆದ್ದಾರಿಯ ಮೂಲಕ ಮಣ್ಣನ್ನು ಸಾಗಿಸಲಾಗುತ್ತಿದೆ. ಮಣ್ಣನ್ನು ಹರಡದಂತೆ ಲಾರಿಗಳ ಹಿಂಭಾಗಕ್ಕೆ ಪ್ಲಾಸ್ಟಿಕ್ ಅಥವಾ ತಾಡಪಾಲು ಮುಚ್ಚಬೇಕು. ಆದರೆ, ಆ ರೀತಿ ಮಾಡದಿರುವ ಕಾರಣ ಹೆದ್ದಾರಿಯ ಸುತ್ತಮುತ್ತ ದೂಳುಮಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೀರಗಣಪತಿ ದೇಗುಲದ ಆವರಣ, ದೇಗುಲದ ಒಳಭಾಗ, ಕಲ್ಯಾಣ ಮಂಟಪ, ಟೋಲ್‌ನಾಕಾ, ಸುತ್ತಮುತ್ತಲಿನ ಮನೆಗಳಲ್ಲಿ ನಿತ್ಯವೂ ದೂಳು ಸ್ವಚ್ಛಗೊಳಿಸುವುದೇ ದೊಡ್ಡ ಸವಾಲಾಗಿದೆ. ಅಲ್ಲದೇ ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ದೂರಿದ್ದಾರೆ.

ನೌಕಾನೆಲೆಯವರು ಪಡೆದುಕೊಂಡಿರುವ ಜಮೀನಿನಲ್ಲಿ ಏಳು ಅಡಿಗಳಷ್ಟು ಎತ್ತರಕ್ಕೆ ಮಣ್ಣನ್ನು ಭರ್ತಿ ಮಾಡಲಾಗುತ್ತಿದೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಒಂದೂವರೆ ಮೆಟ್ರಿಕ್ ಟನ್‌ಗಳಷ್ಟು ಮಣ್ಣನ್ನು ಸುರಿಯಲಾಗಿದೆ. ಅಷ್ಟೇ ಪ್ರಮಾಣದ ಮಣ್ಣನ್ನು ತುಂಬುವುದು ಬಾಕಿಯಿದೆ.

ಸುಮಾರು ಒಂದು ತಿಂಗಳಿನಿಂದ ಈ ಕೆಲಸ ನಡೆಯುತ್ತಿದ್ದು, ಲಾರಿಗಳ ಸಂಚಾರದ ಸಂದರ್ಭದಲ್ಲಿ ಕನಿಷ್ಠ ಸುರಕ್ಷತೆಯನ್ನೂ ಪಾಲಿಸುತ್ತಿಲ್ಲ ಎಂದು ರವೀಂದ್ರ ಅಮದಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದುವೇಳೆ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಮಳೆ ನೀರಿಗೆ ಜಾಗವಿಲ್ಲ’:

ನೌಕಾನೆಲೆಯ ಸುಮಾರು 150 ಎಕರೆ ಪ್ರದೇಶದಲ್ಲಿ ಮಣ್ಣನ್ನು ತುಂಬಿ ಭರ್ತಿ ಮಾಡಲಾಗುತ್ತಿದೆ. ಆದರೆ, ಇದರಿಂದ ಮಳೆಗಾಲದಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದೇ ತೊಂದರೆಯಾಗುತ್ತದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ಕಳೆದ ವರ್ಷ ಜೋರಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66, ಮೇಲಿನಕೇರಿ, ವೀರಗಣಪತಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ಮೂರು ಅಡಿಗಳಷ್ಟು ನೀರು ನಿಂತಿತ್ತು. ನೌಕಾನೆಲೆಯಲ್ಲಿ ಮಣ್ಣು ಭರ್ತಿ ಮಾಡುವ ಸಂದರ್ಭದಲ್ಲಿ ಮಳೆ ನೀರು ಹರಿದು ಹೋಗಲೂ ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT