ಬುಧವಾರ, ಡಿಸೆಂಬರ್ 11, 2019
20 °C
ಸಣ್ಣ ಸಮಾವೇಶಗಳು, ಮತದಾರರ ವೈಯಕ್ತಿಕ ಭೇಟಿಗೆ ಆದ್ಯತೆ

ಕಾಂಗ್ರೆಸ್ ಗೆಲುವಿಗೆ ಹೊಸ ತಂತ್ರ: ಸೊರಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಬಿಜೆಪಿಯ ಪೇಜ್‌ ಪ್ರಮುಖ್ ಕಲ್ಪನೆಗೆ ಪ್ರತಿಯಾಗಿ ಕಾಂಗ್ರೆಸ್‌ ಹೊಸ ತಂತ್ರ ರೂಪಿಸಿದೆ. ಇದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ವಿನಯಕುಮಾರ್ ಸೊರಕೆ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ವಿವಿಧ ಅಂಗಸಂಸ್ಥೆಗಳು ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಪೇಜ್‌ ಪ್ರಮುಖರನ್ನು ನೇಮಿಸಿ ಮತ ಸೆಳೆಯಲಾಗುತ್ತದೆ. ಅದೇ ರೀತಿ ಕಾಂಗ್ರೆಸ್ ಈ ಬಾರಿ ಪ್ರಾಯೋಗಿಕ ಪ್ರಯತ್ನ ಮಾಡಿದೆ. ಪ್ರತಿ ಬೂತ್‌ನಲ್ಲಿ 50 ಮನೆಗಳಿಗೆ ಒಂದರಂತೆ ನಾಲ್ಕು ವಿಭಾಗ ಮಾಡಿಕೊಂಡು, ಪ್ರತಿ ಒಂದು ವಿಭಾಗಕ್ಕೆ ಐದು ಜನರ ಒಂದು ತಂಡ ನೇಮಿಸಿ ಪ್ರಚಾರ ನಡೆಸಲಾಗಿದೆ. ಒಬ್ಬ ಕಾರ್ಯಕರ್ತ 10 ಮನೆಗಳ ಜವಾಬ್ದಾರಿ ನಿರ್ವಹಿಸಿದ್ದಾನೆ. ಮಹಿಳಾ ಮತದಾರರನ್ನು ತಲುಪಲಾಗಿದೆ. ಸಣ್ಣ ಸಮಾವೇಶ ನಡೆಸಿ, ಜನರನ್ನು ವಿಶ್ವಾಸಕ್ಕೆ ಪಡೆಯಲಾಗಿದೆ’ ಎಂದರು.

ಅರ್ಹ–ಅನರ್ಹರ ನಡುವೆ ನಡೆಯುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ. ಆಮಿಷವನ್ನು ಮೆಟ್ಟಿನಿಂತು ಮತದಾರರು ಮತ ಚಲಾಯಿಸುವ ವಿಶ್ವಾಸವಿದೆ. ಯುವ ಮತದಾರರು ಕಾಂಗ್ರೆಸ್‌ನೆಡೆಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಪಕ್ಷಾಂತರಿಗಳನ್ನು ಸೋಲಿಸುವುದು ಜನರ ಗುರಿಯಾಗಿದೆ ಎಂದು ಹೇಳಿದರು.

‘ಸಚಿವ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ನಾಮಧಾರಿಗಳಿಗೆ ನಾಮ ಹಾಕಿದೆ ಎಂದು ಹೇಳಿರಬಹುದು. ಹೆಬ್ಬಾರರು ವಿಭೀಷಣ ಎಂದೂ ಹೇಳಿರಬಹುದು. ಆದರೆ, ವಾಸ್ತವದಲ್ಲಿ ನಾಮಧಾರಿ ಸಮುದಾಯದ ಎಸ್.ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದಾಗಲೇ ಮುಖ್ಯಮಂತ್ರಿಯಾಗಿದ್ದರು. ಜನಾರ್ದನ ಪೂಜಾರಿ, ಕಾಗೋಡು ತಿಮ್ಮಪ್ಪ ಇನ್ನೂ ಅನೇಕ ನಾಯಕರು ಕಾಂಗ್ರೆಸ್‌ನಲ್ಲಿದ್ದು ಅಧಿಕಾರ ಪಡೆದಿದ್ದಾರೆ. ಶ್ರೀನಿವಾಸ ಪೂಜಾರಿ ಅವರು ಅನರ್ಹರ ಪರವಾಗಿ ಕೆಲಸ ಮಾಡುತ್ತಿರುವ ಕಾರಣಕ್ಕೆ ಅವರಿಗೆ ನಾಮ ಹಾಕಿದ ಹಾಗೆ ಕಾಣಬಹುದು’ ಎಂದು ಟೀಕಿಸಿದ ಅವರು, ‘ಹೆಬ್ಬಾರರು ವಿಭೀಷಣ ಅಲ್ಲ, ಅವರು ಕಂಸ’ ಎಂದರು.

ಉಪಚುನಾವಣೆಯ ನಂತರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ್ದ ಅನುದಾನದಲ್ಲಿ ನಡೆದ ಕಾಮಗಾರಿಗಳ ಅವ್ಯವಹಾರದ ತನಿಖೆ ನಡೆಸುತ್ತದೆ ಎಂದು ಹೇಳಿದರು. ಪಕ್ಷದ ಪ್ರಮುಖರಾದ ಜಯಶ್ರೀ ಮೊಗೇರ, ಸಿ.ಎಫ್.ನಾಯ್ಕ, ಜಗದೀಶ ಗೌಡ, ಎಸ್.ಟಿ.ಹೆಗಡೆ, ಜೆ.ಡಿ.ನಾಯ್ಕ, ಪುಷ್ಪಾ ನಾಯ್ಕ, ಬಸವರಾಜ ದೊಡ್ಮನಿ, ಸಂತೋಷ ಶೆಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)