ಉಗ್ರರ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್: ನಿರ್ಮಲಾ ಸೀತಾರಾಮನ್ ಆರೋಪ

ಬುಧವಾರ, ಏಪ್ರಿಲ್ 24, 2019
23 °C
ಬಿಜೆಪಿ ಪ್ರಚಾರ ಕಾರ್ಯಕ್ರಮ

ಉಗ್ರರ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್: ನಿರ್ಮಲಾ ಸೀತಾರಾಮನ್ ಆರೋಪ

Published:
Updated:
Prajavani

ಕಾರವಾರ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಫಲವಾಗಿ ಪಾಕಿಸ್ತಾನ ಈಗ ಮೂಲೆಗುಂಪಾಗಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆ ದೇಶ, ಈಗ ಬೂದು ಬಣ್ಣದ ಪಟ್ಟಿಯಲ್ಲಿದೆ. ಸದ್ಯದಲ್ಲೇ ಕಪ್ಪುಪಟ್ಟಿಗೆ ಸೇರಲಿದ್ದು, ಅದರ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ನಿರ್ಬಂಧಗಳು ಬೀಳಲಿವೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದರು. 

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2008ರಲ್ಲಿ ಮುಂಬೈ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಭಾರತೀಯ ಸೈನ್ಯ ಸಿದ್ಧವಾಗಿತ್ತು. ಆದರೆ, ಅಂದಿನ ಕೇಂದ್ರ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರಲಿಲ್ಲ. ಈಗ ನಮ್ಮ ವೀರಯೋಧರ ಪರಾಕ್ರಮಗಳ ಬಗ್ಗೆ ಹೇಳಲು ಕಾಂಗ್ರೆಸ್‌ನವರಿಗೆ ಸಂಕಟವಾಗುತ್ತದೆ’ ಎಂದು ಟೀಕಿಸಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ನಿರ್ಮೂಲನೆ, ಸ್ವಚ್ಛ ಭಾರತ, ಭ್ರಷ್ಟಾಚಾರ ನಿರ್ಮೂಲನೆ, ಬಡತನ ನಿರ್ಮೂಲನೆ ಹಾಗೂ ಕೌಶಲಾಭಿವೃದ್ಧಿ ಎಂಬ ಪಂಚಸೂತ್ರಗಳ ಆಧಾರದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಐದು ವರ್ಷಗಳ ಆಡಳಿತದಲ್ಲಿ ಒಂದೂ ಹಗರಣಗಳಿಲ್ಲದ ಹೆಗ್ಗಳಿಕೆ ಬಿಜೆಪಿ ಸರ್ಕಾರದ್ದು’ ಎಂದು ಹೇಳಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ₹ 72 ಸಾವಿರ ನೀಡುವುದಾಗಿ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದ್ದಾರೆ. ಆದರೆ, ಇಷ್ಟು ವರ್ಷ ಅಧಿಕಾರದಲ್ಲಿದ್ದ ಆ ಪಕ್ಷ 72 ಪೈಸೆಯನ್ನೂ ಜನರಿಗೆ ನೀಡಿಲ್ಲ’ ಎಂದು ಟೀಕಿಸಿದರು.

‘ನಾವು ದೇಶನಿಷ್ಠೆ ಇರುವ ನಾಯಿಗಳು’: ‘100 ಮೀಟರ್ (ವಿಧಾನಸಭೆ ಚುನಾವಣೆ) ಸೋತು 800 ಮೀಟರ್ (ಲೋಕಸಭೆ ಚುನಾವಣೆ) ಸ್ಪರ್ಧೆಗೆ ಆನಂದ ಅಸ್ನೋಟಿಕರ್ ನಿಂತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯನ್ನು ನೋಡಿದಾಗ ಆಲಿಬಾಬಾ ಮತ್ತು 40 ಕಳ್ಳರು ಲೂಟಿ ಮಾಡಲು ನಿಂತಿದ್ದಾರೆ ಎಂದೆನಿಸುತ್ತದೆ’ ಎಂದು ಬಿಜೆಪಿ ಮುಖಂಡ ಸುನೀಲ ಹೆಗಡೆ ಟೀಕಿಸಿದರು. 

‘ಬಿಜೆಪಿಯವರು ನಾಯಿಗಳು ಎಂದು ಆನಂದ ಅಸ್ನೋಟಿಕರ್ ಹೇಳಿದ್ದಾರೆ. ನಾವು ನಾಯಿಗಳು ನಿಜ. ಆದರೆ, ನಾವು ದೇಶನಿಷ್ಠೆ, ಪಕ್ಷನಿಷ್ಠೆ ಇರುವ ನಾಯಿಗಳು. ಆರಾರು ತಿಂಗಳಿಗೊಮ್ಮೆ ಪಕ್ಷ ಬದಲಿಸುವ ಆನಂದ ಅಸ್ನೋಟಿಕರ್‌ಗೆ ಈ ನಿಷ್ಠೆ ಎಲ್ಲಿಂದ ಬರಬೇಕು? ನಾವು ಸುಳ್ಳು ಹೇಳುವ ವಿರೋಧ ಪಕ್ಷಗಳನ್ನು ಕಚ್ಚುವ ನಾಯಿಗಳು’ ಎಂದು ವಾಗ್ದಾಳಿ ನಡೆಸಿದರು.

ಪಕ್ಷ ಸೇರ್ಪಡೆ: ಜೆಡಿಎಸ್ ರಾಜ್ಯ ಘಟಕದ ಕಾರ್ಯಕಾರಿ ಸದಸ್ಯ ಪುರುಷೋತ್ತಮ ಸಾವಂತ್, ಕಾರವಾರ ನಗರಸಭೆಯ ಪಕ್ಷೇತರ ಸದಸ್ಯ ಪ್ರಕಾಶ ಪಿ.ನಾಯ್ಕ, ಮುಖಂಡರಾದ ಆರ್.ಎಸ್.ನಾಯ್ಕ, ಶ್ರೀಕಾಂತ ನಾಯ್ಕ, ಕಡವಾಡ ಗ್ರಾಮ ಪಂಚಾಯ್ತಿಯ ಎಲ್ಲ ಸದಸ್ಯರು ಇದೇ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡರು. 

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿನಾಯ್ಕ, ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಹೆಗಡೆ, ಮುಖಂಡರಾದ ವಿನೋದ್ ಪ್ರಭು, ಗಂಗಾಧರ ಭಟ್, ಗಣಪತಿ ಉಳ್ವೇಕರ್, ಭಾಸ್ಕರ್ ನಾರ್ವೇಕರ್, ವಿವಿಧ ಮುಖಂಡರು ವೇದಿಕೆಯಲ್ಲಿದ್ದರು.  

ಇದಕ್ಕೂ ಮೊದಲು ನಗರದ ಮಿತ್ರ ಸಮಾಜ ಮೈದಾನದಿಂದ ಕಾರ್ಯಕ್ರಮ ನಡೆದ ಮಾಲಾದೇವಿ ದೇವಸ್ಥಾನದ ಮೈದಾನದವರೆಗೆ ಮೆರವಣಿಗೆ ಮಾಡಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !