ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಡೇಶ್ವರದಲ್ಲಿ ಮೂಲಸೌಕರ್ಯದ ಕೊರತೆ

ನಿತ್ಯವೂ ಸಾವಿರಾರು ಪ್ರವಾಸಿಗರುವ ಧಾರ್ಮಿಕ, ಪ್ರವಾಸಿ ತಾಣ
Last Updated 6 ಮೇ 2019, 9:15 IST
ಅಕ್ಷರ ಗಾತ್ರ

ಭಟ್ಕಳ:ದಿನನಿತ್ಯವೂ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿರುವ ಮುರ್ಡೇಶ್ವರ ವಿಶ್ವವಿಖ್ಯಾತ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ. ಆದರೆ, ಇಲ್ಲಿನ ಕಡಲತೀರ ಎಷ್ಟು ಸುಂದರವೋ ಅಷ್ಟೆ ಸಮಸ್ಯೆಗಳ ಆಗರವೂ ಆಗಿದೆ.

ಮುರ್ಡೇಶ್ವರ ದೇವಸ್ಥಾನದ ಎಡಭಾಗದ ಸಮುದ್ರ ತೀರದಲ್ಲಿ ಹಚ್ಚಿನ ಪ್ರವಾಸಿಗರು ಸೇರುತ್ತಾರೆ. ಆದರೆ, ಈ ತೀರದಲ್ಲಿ ಶೌಚಾಲಯವೇ ಇಲ್ಲ. ಎಡಭಾಗದ ಸಮುದ್ರ ತೀರದಲ್ಲಿ ಪ್ರವಾಸಿಗರೇ ಇರುವುದಿಲ್ಲ. ಇಲ್ಲಿ ಖಾಸಗಿಯವರು ನಿರ್ವಹಣೆ ಮಾಡುವಎರಡು ಶೌಚಾಲಯಗಳಿವೆ.ಆದರೆ, ಇಲ್ಲಿ ಅವರು ಕೇಳಿದಷ್ಟು ಹಣ ಕೊಡಬೇಕಾಗಿದೆ.

ರಜಾ ದಿನಗಳಲ್ಲಿ ಮುರ್ಡೇಶ್ವರಕ್ಕೆ ದಿನವೊಂದಕ್ಕೆ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರು ಎಸೆಯುವ ನೀರಿನ ಬಾಟಲಿಗಳು, ತಿಂಡಿ ಪೊಟ್ಟಣದ ಕಸ, ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸಮುದ್ರ ತೀರದಲ್ಲಿ ದೀಪಗಳ ವ್ಯವಸ್ಥೆ ಇಲ್ಲ, ರಾತ್ರಿ ತೀರದಲ್ಲಿ ಕಾರ್ಗತ್ತಲು ಆವರಿಸಿಕೊಳ್ಳುತ್ತದೆ. ಬೆಳಿಗ್ಗೆ ತೀರದಲ್ಲಿ ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳಿರುತ್ತವೆ.

ಕಳ್ಳರ ಹಾವಳಿ:‘ಕಳ್ಳಕಾಕರೇನೂ ಇಲ್ಲಿ ಕಡಿಮೆಯಿಲ್ಲ. ನಿಲ್ಲಿಸಿರುವ ವಾಹನಗಳ ಬಾಗಿಲು, ಕಿಟಕಿ ತೆಗೆದು ಅದರಲ್ಲಿರುವ ಸಾಮಾನುಗಳನ್ನು ಎಗರಿಸುತ್ತಾರೆ. ಸಮುದ್ರತೀರದಲ್ಲಿ ಬಟ್ಟೆ, ಮೊಬೈಲ್, ಕ್ಯಾಮೆರಾಇಟ್ಟು ಸ್ನಾನಕ್ಕೆ, ಈಜಾಡುವುದಕ್ಕೆ ಸಮುದ್ರಕ್ಕೆ ತೆರಳಿ ಹಿಂತಿರುಗುವುದರೊಳಗೆ ಇಟ್ಟಿದ್ದ ವಸ್ತುಗಳು ನಾಪತ್ತೆಯಾದ ಹಲವು ಪ್ರಕರಣಗಳಿವೆ.ತೀರದಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುವುದಿಲ್ಲ’ ಎಂಬ ಆರೋಪ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯ ಈಶ್ವರ ದೊಡ್ಮನೆ ಅವರದ್ದು.

‘ಸಮುದ್ರ ತೀರದಲ್ಲಿ ಕುಡಿಯುವ ನೀರಿಗೆ ಪ್ರವಾಸಿಗರು ಪರದಾಡಬೇಕಿದೆ. ದುಡ್ಡು ಕೊಟ್ಟು ಖರೀದಿಸಿದ ಬಾಟಲಿ ನೀರೇ ಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತ್ಯಾಜ್ಯ ನೀರು:ಹೊಟೇಲ್, ವಸತಿಗೃಹಗಳ ಶೌಚಾಲಯದ ತ್ಯಾಜ್ಯ ನೀರು, ಚರಂಡಿ ಮೂಲಕ ನಿತ್ಯ ಸಮುದ್ರ ಸೇರುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಒಂದೆಡೆಯಾದರೆ, ರಸ್ತೆಗಳಲ್ಲಿ ಪ್ರವಾಸಿಗರು ಮೂಗು ಮುಚ್ಚಿಕೊಂಡು ತಿರುಗಾಡಬೇಕಿದೆ.

ದೇವಸ್ಥಾನದ ಆವರಣ ಹೊರತುಪಡಿಸಿ ಉಳಿದೆಡೆ ಬೇಕಾಬಿಟ್ಟಿಯಾಗಿ ರಸ್ತೆಗಳ ಪಕ್ಕದಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ.

‘ದೇವಸ್ಥಾನಕ್ಕೆ ಬರುವ ಪ್ರವಾಸಿಗರಿಗೆ, ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ನೀಡಲು ದೇವಸ್ಥಾನದಿಂದಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಹೇಳಿದರು.

ಮುರ್ಡೇಶ್ವರ ಸಮುದ್ರ ತೀರದಲ್ಲಿ ರಾತ್ರಿ 11ರವರೆಗೆ ಪ್ರವಾಸಿಗರ ಸುರಕ್ಷೆಗಾಗಿ ಲೈಫ್ ಗಾರ್ಡ್ ಸಿಬ್ಬಂದಿ ಇರುತ್ತಾರೆ. ಅಲ್ಲದೇ ಬೀಟ್ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ಸಿಪಿಐ ಕೆ.ಎಲ್.ಗಣೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT