ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಭಾವಿಕೇರಿ ತೀರದಲ್ಲಿ ಸಮುದ್ರ ಸೇರಿದ ಕಡಲಾಮೆ ಮರಿಗಳು

Last Updated 7 ಮಾರ್ಚ್ 2022, 16:02 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕಿನ ಭಾವಿಕೇರಿಯ ಕಡಲ ತೀರದಲ್ಲಿ ಮೊಟ್ಟೆಯಿಂದ ಹೊರಬಂದ ‘ಆಲಿವ್ ರಿಡ್ಲೆ’ ಕಡಲಾಮೆ ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಮತ್ತು ಶಾಲಾ ವಿದ್ಯಾರ್ಥಿಗಳು ಸೋಮವಾರ ಸಮುದ್ರಕ್ಕೆ ಸೇರಿಸಿದರು.

ಇದೇ ಮೊದಲ ಬಾರಿಗೆ, ಭಾವಿಕೇರಿ ಕಡಲತೀರದ ಮರಳಿನಲ್ಲಿ ಜ.10ರಂದು ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಅರಣ್ಯ ಇಲಾಖೆ ಸ್ಥಳೀಯರ ಸಹಕಾರದೊಂದಿಗೆ ಸುರಕ್ಷಿತವಾಗಿ ಮರಳಿನಲ್ಲಿ ಹೂತಿಟ್ಟು, ಸುತ್ತಲೂ ಬೇಲಿ ನಿರ್ಮಿಸಿ ಸಂರಕ್ಷಿಸಿತ್ತು. 56 ದಿನಗಳ ನಂತರ ಸೋಮವಾರ ಮಧ್ಯಾಹ್ನ 2 ಗಂಟೆಗೆ 51 ಮರಿಗಳು ಒಂದೊಂದಾಗಿ ಮೇಲೆ ಬಂದಿದ್ದವು. ಗೂಡು ನಿರ್ಮಿಸಿದ ಜಾಗದಲ್ಲಿ ಸಸ್ಯಗಳ ಬೇರು ಇರುವುದರಿಂದ, ಉಷ್ಣತೆ ಕಡಿಮೆಯಾಗಿ ತೇವಾಂಶ ಹೆಚ್ಚಾದ ಪರಿಣಾಮ ಮೊಟ್ಟೆಯೊಡೆಯುವಿಕೆ ಕಡಿಮೆಯಾಗಿತ್ತು.

ಸಾರ್ವಜನಿಕರಿಗೆ ಮಾಹಿತಿ ನೀಡಿದ ಅಂಕೋಲಾದ ಪ್ರಭಾರಿ ಮರೈನ್ ಉಪ ವಲಯ ಅರಣ್ಯಾಧಿಕಾರಿ ಅಭಿಷೇಕ್ ವಾರದ, ‘ಆಲಿವ್ ರಿಡ್ಲೆ ಕಡಲಾಮೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ ಒಂದರಲ್ಲಿ ಬರುವ ಅಳಿವಿನಂಚಿನ ಮತ್ತು ಬಹುವಿರಳ ಪ್ರಭೇದವಾಗಿದೆ. ಅವುಗಳಿಗೆ ಆಳಸಮುದ್ರ ಮಾತ್ರ ವಾಸಯೋಗ್ಯ ಸ್ಥಳವಾಗಿದೆ. ಸಮುದ್ರಕ್ಕೆ ಬಿಡಲಾಗುವ ಸಾವಿರ ಮರಿಗಳಲ್ಲಿ ಒಂದು ಮರಿ ಮಾತ್ರ ಬದುಕುವ ಸಾಧ್ಯತೆ ಇರುತ್ತದೆ’ ಎಂದರು.

‘15 ವರ್ಷಗಳ ಬೆಳವಣಿಗೆಯ ನಂತರ ಪ್ರೌಢಾವಸ್ಥೆ ತಲುಪಿ 45 ವರ್ಷಗಳವರೆಗೆ ಮೊಟ್ಟೆ ಇಡುತ್ತವೆ. ಮರಿಯೊಡೆದ ಸ್ಥಳದಲ್ಲಿಯೇ ಬಂದು ಮೊಟ್ಟೆ ಇಡುವುದು ಇವುಗಳ ವಿಶೇಷ. ಈ ಪ್ರಕ್ರಿಯೆಗೆ ನೇತಲ್ ಒಮಿಂಗ್ ಎನ್ನಲಾಗುತ್ತದೆ’ ಎಂದು ತಿಳಿಸಿದರು.

ಸಂಶೋಧನಾ ವಿದ್ಯಾರ್ಥಿ ಶಾ ನವಾಜ್ ಮಾತನಾಡಿ, ‘ಆಲಿವ್ ರಿಡ್ಲೆ ಕಡಲಾಮೆ ಸಮುದ್ರದಿಂದ 10 ಮೀಟರ್ ದೂರದ ತೀರಕ್ಕೆ ಬಂದು ಒಂದರಿಂದ ಒಂದೂವರೆ ಅಡಿ ಆಳದಲ್ಲಿ ಮೊಟ್ಟೆ ಇಡುತ್ತವೆ. ಉಷ್ಣತೆ ಹೆಚ್ಚಿದ್ದರೆ ಹೆಣ್ಣು ಮರಿಗಳು, ಕಡಿಮೆ ಇದ್ದರೆ ಗಂಡು ಮರಿಗಳು ಅಧಿಕವಾಗಿರುತ್ತವೆ’ ಎಂದರು.

ಮರೈನ್ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಬಿ. ಮಾತನಾಡಿ, ‘ಭಾವಿಕೇರಿ ತೀರದಲ್ಲಿ ಮೂರು ಹಂತದಲ್ಲಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ. ಒಂದು ಗೂಡಿನಲ್ಲಿ 100- 150 ಮೊಟ್ಟೆಗಳಿರುವ ಸಾಧ್ಯತೆ ಇರುತ್ತದೆ. ಅವುಗಳಲ್ಲಿ ಗರಿಷ್ಠ 95ರವರೆಗೆ ಮರಿಗಳು ಹೊರ ಬರಬಹುದು’ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಸೇರಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT