ಸಾವಯವ ಕೃಷಿಕರಿಗೆ ಮಾರುಕಟ್ಟೆ ವ್ಯವಸ್ಥೆ

ಬುಧವಾರ, ಮಾರ್ಚ್ 20, 2019
23 °C
ಕದಂಬ ಮಾರ್ಕೆಟಿಂಗ್‌ನಲ್ಲಿ ಸಾವಯವ ಸಂತೆ

ಸಾವಯವ ಕೃಷಿಕರಿಗೆ ಮಾರುಕಟ್ಟೆ ವ್ಯವಸ್ಥೆ

Published:
Updated:
Prajavani

ಶಿರಸಿ: ಸಾವಯವ ಉತ್ಪನ್ನ ಹಾಗೂ ಗೃಹೋತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಕದಂಬ ಮಾರ್ಕೆಟಿಂಗ್ ಸಹಕಾರಿ ಸಂಘದಲ್ಲಿ ಶನಿವಾರ ಸಾವಯವ ಸಂತೆ ನಡೆಯಿತು. ಜೊಯಿಡಾದ ಅಕ್ಕಿ, ಗೋಕರ್ಣದ ತರಕಾರಿ, ಅಂಕೋಲಾದ ಕಲ್ಲಂಗಡಿ, ಹೊನ್ನಾವರದ ಕೋಕಂ, ಭಟ್ಕಳದ ಉಂಡೆಬೆಲ್ಲ ಹೀಗೆ ರೈತರು ಬೆಳೆದ ಹಾಗೂ ತಯಾರಿಸಿದ ಉತ್ಪನ್ನಗಳು ಅಲ್ಲಿದ್ದವು.

ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಹಾಗೂ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಆಶ್ರಯದಲ್ಲಿ ನಡೆದ ಸಂತೆಯನ್ನು ಕೃಷಿ ಉಪನಿರ್ದೇಶಕ ನಟರಾಜ ಚಾಲನೆ ನೀಡಿದರು. ಆಹಾರ ಉತ್ಪನ್ನಗಳು ವಿಷಮಯ ಆಗುತ್ತಿವೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಆಹಾರವೇ ಆರೋಗ್ಯಕ್ಕೆ ಮೂಲವಾಗಲು ಸಾವಯವ ಕೃಷಿ ಪೂರಕವಾಗಿದೆ ಎಂದರು.

ಜೊಯಿಡಾ ಶಿಂದೋಳಿಯ ಸದಾನಂದ ಮಡಿವಾಳ ಅವರು ಕೆಂಪಕ್ಕಿ, ಜೀರಾ ಅಕ್ಕಿ, ಸೋನಾ ಮಸೂರಿ, ಪೂನಂ ತಳಿಯ ಅಕ್ಕಿಯನ್ನು ಮಾರಾಟಕ್ಕೆ ತಂದಿದ್ದರು. ‘ವ್ಯವಸ್ಥಿತ ಮಾರುಕಟ್ಟೆಯಿದ್ದರೆ ರೈತರಿಗೆ ಬೆಳೆ ಬೆಳೆಯಲು ಉತ್ಸಾಹ ಬರುತ್ತದೆ. ಜೊಯಿಡಾದ ಅಕ್ಕಿಗೆ ಬೆಳಗಾವಿ, ಚಿತ್ರದುರ್ಗ, ಬೆಂಗಳೂರಿನಲ್ಲೂ ಬೇಡಿಕೆಯಿದೆ’ ಎಂದು ಅವರು ‘ಪ್ರಜಾವಾಣಿ’ ಜತೆ ಮಾತನಾಡುತ್ತ ಹೇಳಿದರು.

ಅಂಕೋಲಾ ಹಿಲ್ಲೂರಿನ ಸಾವಯವ ಕೃಷಿಕರ ಕೂಟದ ಗಣೇಶ ಶೆಟ್ಟಿ ಅವರು ತಂದಿದ್ದ ಕಲ್ಲಂಗಡಿ, ಸುವರ್ಣ ಗಡ್ಡೆ, ಡೊಳ್ಳು ಮೆಣಸು, ನುಗ್ಗಿಕಾಯಿ, ಬಾಳೆಕಾಯಿ, ಬಿಂಬಲ ಕಾಯಿಗೆ ಬಹು ಬೇಡಿಯಿತ್ತು. ‘ತೋಟದಲ್ಲಿ ಬೆಳೆದಿರುವ ಉತ್ಪನ್ನಗಳಿಗೆ ಹಳ್ಳಿಯಲ್ಲಿ ವಿಶೇಷ ಬೇಡಿಕೆಯಿಲ್ಲ. ನಗರಕ್ಕೆ ತಂದರೆ ಒಳ್ಳೆಯ ದರ ಸಿಗುತ್ತದೆ’ ಎಂದು ಅವರು ಹೇಳಿದರು.

ಗೋಕರ್ಣದ ಮಜ್ಜಿಗೆ ಮೆಣಸಿಗೆ ಗ್ರಾಹಕರು ಮುಗಿಬಿದ್ದರು. ನಾಗರಾಜ ಗೌಡ ಅವರು, ಬದನೆಕಾಯಿ, ಚೌಳಿಕಾಯಿ, ತೊಂಡೆಕಾಯಿ, ಹಾಗಲಕಾಯಿ ಹೀಗೆ ಹಲವಾರು ತರಕಾರಿಗಳನ್ನು ತಂದಿದ್ದರು. ಹಿತ್ಲಕಾರಗದ್ದೆಯ ಶಂಕರ ಭಟ್ಟ ಅವರು, ಬಿಸಿ ಬಿಸಿ ಮೆಂತೆ ದೋಸೆ, ರಾಗಿ ದೋಸೆ ತಯಾರಿಸಿ ಕೊಡುತ್ತಿದ್ದರು. ಸಿದ್ದಾಪುರ ಕಿಲಾರದ ಕೆಂಪಕ್ಕಿ, ಸಿರಿಧಾನ್ಯದ ತಿನಿಸುಗಳು ಸಂತೆಯಲ್ಲಿದ್ದವು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !