ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಬೆಂಕಿಯಿಂದ ಬಾಣಲೆಗೆ ಬಿದ್ದ ರೈತ

ಮಳೆಯಲ್ಲಿ ನೆನೆದ ಭತ್ತದ ಪೈರು ಒಣಗಿಸಲು ದಿನಪೂರ್ತಿ ಪರದಾಟ
Last Updated 23 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಕುಮಟಾ: ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಯು ತಾಲ್ಲೂಕಿನ ರೈತರನ್ನು ಹೈರಾಣಾಗಿಸಿದೆ. ಗದ್ದೆಯಲ್ಲೇ ನೀರಿನಲ್ಲಿ ಮುಳುಗಿದ ಭತ್ತದ ಪೈರನ್ನು ಅಂಗನವಾಡಿ ಕೇಂದ್ರದ ಮೈದಾನ, ರೈಲು ಹಳಿ ಪಕ್ಕದಲ್ಲಿ ಒಣಗಿಸುತ್ತಿದ್ದಾರೆ. ಆಗಲೂ ಮಳೆ ಬರುವ ಸಾಧ್ಯತೆಯನ್ನು ಕಂಡು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಊರಕೇರಿ, ಅಬ್ಬಿ ಮುಂತಾದೆಡೆ ಗದ್ದೆಯಲ್ಲೇ ಮಳೆ ನೀರಿನಲ್ಲಿ ಸಂಪೂರ್ಣ ನೆನೆದ ಪೈರನ್ನು ಪಕ್ಕದ ಒಣ ಜಾಗದಲ್ಲಿ ಚಾಪೆ, ತಾಡಪತ್ರೆ ಹಾಸಿಕೊಂಡು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತೆನೆಯನ್ನು ಬಡಿದು ಭತ್ತ ಉದುರಿಸುತ್ತಿದ್ದಾರೆ. ಹುಲ್ಲು ದನಕರುಗಳ ಮೇವಿಗಾಗಲಿ ಎಂದು ದೂರದಲ್ಲಿ ಸಿಗುವ ಖಾಲಿ ಜಾಗಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಜೆಯವರೆಗೂ ಬಿಸಿಲಲ್ಲಿ ಹುಲ್ಲು ಒಣಗಿಸುತ್ತಾರೆ. ಕತ್ತಲಾದ ಮೇಲೆ ಮತ್ತೆ ಎಲ್ಲವನ್ನು ಹೊರೆ ಕಟ್ಟಿ ಮನೆಗೆ ಹೊತ್ತುಕೊಂಡು ಹೋಗಿ ಬೆಚ್ಚಗಿಡುವ ರೈತರ ಪ್ರಯತ್ನವು ಎಂಥವರಿಗಾದರೂ ಕಣ್ಣೀರು ತರಿಸುತ್ತದೆ.

‘ಪೈರಿನಿಂದ ಭತ್ತ ಬಡಿದು ಹುಲ್ಲು ಒಣಗಿಸುವಾಗ ಮಳೆ ಬಂದರೆ ಇಡೀ ದಿನ ಮಾಡಿದ್ದೆಲ್ಲ ನೀರಿನಲ್ಲಿ ಹೋಮದಂತಾಗುತ್ತದೆ. ಬಡಿದ ಹಸಿ ಭತ್ತವನ್ನು ಅಟ್ಟದಲ್ಲಿ ಒಣಗಿಸಿ ಚೀಲ ತುಂಬಿಟ್ಟರೆ ಮಾತ್ರ ಮುಂದೆ ಊಟ ಮಾಡಲು ಸಾಧ್ಯ. ಕೊಯ್ದು ಹಾಕಿದ ಪೈರು ಮಳೆ ನೀರಿನಲ್ಲಿ ಮುಳುಗಿ ಎಂಟು ದಿವಸವಾಗಿದೆ. ಅಂದಿನಿಂದ ನಮಗೆಲ್ಲ ಇದೇ ಕೆಲಸವಾಗಿದೆ’ ಎಂದು ಅಬ್ಬಿ ಗ್ರಾಮದ ರೈತ ಮಹಿಳೆ ಗಣಪಿ ಗೌಡ ನಗುತ್ತಲೇ ಹೇಳುತ್ತಾರೆ.

450 ಹೆಕ್ಟೇರ್ ಹಾನಿ:‘ಮೊನ್ನೆ ಬಿದ್ದ ಭಾರಿ ಮಳೆಗೆ ತಾಲ್ಲೂಕಿನ ಸುಮಾರು 450 ಹೆಕ್ಟೇರ್‌ಗಳಷ್ಟು ಭತ್ತದ ಪೈರು ಮಳೆ ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ನಿಯಮ ಪ್ರಕಾರ ಹಾನಿಯಾದ ಒಂದು ಹೆಕ್ಟೇರ್ ಭತ್ತ ಕೃಷಿ ಪ್ರದೇಶಕ್ಕೆ ₹ 6,500 ಪರಿಹಾರ ನೀಡಲಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಚಂದ್ರಕಲಾ ಬರ್ಗಿ ಮಾಹಿತಿ ನೀಡಿದ್ದಾರೆ.

‘ಪರಿಹಾರಕ್ಕೆ ಅರ್ಜಿ ಸಲ್ಲಿಸುವ ರೈತರು ತಮ್ಮ ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿಗಳನ್ನು ಕೊಡಬೇಕು. ಆದರೆ, ಹೆಚ್ಚಿನ ಕೃಷಿಕರು ಬೇರೆಯವರ ಜಮೀನು ಗೇಣಿ ಆಧಾರದ ಮೇಲೆ ಕೃಷಿ ಮಾಡಿದ್ದಾರೆ. ಆದ್ದರಿಂದ ಜಮೀನು ಮಾಲೀಕರ ಭೂ ದಾಖಲೆಗಳನ್ನು ಕೊಡಬೇಕಾಗುತ್ತದೆ. ಆಗ ಪರಿಹಾರವು ಭೂ ಮಾಲೀಕರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇದು ಪರಿಹಾರ ವಿತರಣೆಯ ತಾಂತ್ರಿಕ ಸಮಸ್ಯೆಯಾಗಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT