ಮಂಗಳವಾರ, ಮೇ 18, 2021
24 °C

ಮುಖ್ಯ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹ: ಪಾಲಕರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಣೇಶನಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ, ವಿದ್ಯಾರ್ಥಿಗಳು ಪಾಲಕರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.

‘ಬಿ’ ವಲಯದಲ್ಲಿದ್ದ ಶಾಲೆಯನ್ನು ‘ಎ’ ವಲಯಕ್ಕೆ ಸೇರಿಸಲಾಗಿದೆ. ಗ್ರಾಮ ಪಂಚಾಯ್ತಿಯ ಸೌಲಭ್ಯ ಆಶ್ರಯಿಸಿರುವ ಶಾಲೆಯನ್ನು ನಗರ ವ್ಯಪ್ತಿಗೆ ಆಧಾರರಹಿತವಾಗಿ ಅಧಿಕಾರಿಗಳು ಸೇರಿಸಿದ್ದು ಸರಿಯಲ್ಲ. ಅಲ್ಲದೇ, ಮುಖ್ಯ ಶಿಕ್ಷಕರಾಗಿದ್ದ ಎಂ.ಎಚ್.ನಾಯ್ಕ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿದ್ದಾರೆ. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದ ಅವರು, ಹಿಂದುಳಿದ ಪ್ರದೇಶದಲ್ಲಿರುವ ಈ ಶಾಲೆಯ ಸರ್ವತೋಮುಖ ಅಭಿವೃದ್ಧಿ ಮಾಡಿದ್ದರು ಎಂದು ಪಾಲಕರು ಹೇಳಿದರು.

ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಮಾತನಾಡಿ, ‘ಗಣೇಶನಗರ ಪ್ರೌಢಶಾಲೆಯ ಶೈಕ್ಷಣಿಕ ಸಾಧನೆಗೆ ಎಂ.ಎಚ್.ನಾಯ್ಕ ಕಾರಣರಾಗಿದ್ದಾರೆ. ಹಿಂದುಳಿದ ಸಮುದಾಯದ ಮಕ್ಕಳೇ ಅಧಿಕವಾಗಿರುವ ಇಲ್ಲಿ, ಶಿಕ್ಷಣದ ಅರಿವು ಮೂಡಿಸಿ, ಶಾಲೆಯ ಫಲಿತಾಂಶ ಹೆಚ್ಚಲು ಅವರು ನಿರಂತರ ಶ್ರಮವಹಿಸಿದ್ದಾರೆ. ಅವರ ವರ್ಗಾವಣೆಯಿಂದ ವಿದ್ಯಾರ್ಥಿಗಳು, ಪಾಲಕರಿಗೆ ಆಘಾತವಾಗಿದೆ’ ಎಂದರು.

ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಮುಖ್ಯಸ್ಥೆ ಶೋಭಾ ನಾಯ್ಕ ಮಾತನಾಡಿ, ‘ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ದಿಢೀರ್ ಆಗಿ ಶಿಕ್ಷಕರ ವರ್ಗಾವಣೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ನಡೆಸುತ್ತೇವೆ’ ಎಂದರು.

ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು. ಹುತ್ಗಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಭಂಡಾರಿ, ನಗರಸಭೆ ಸದಸ್ಯೆ ಮಾಲತಿ ಶೆಟ್ಟಿ, ಪ್ರಮುಖರಾದ ಪ್ರಕಾಶ ಆಚಾರಿ, ಹೇಮಲತಾ ಮಡಿವಾಳ, ಚಂದ್ರವ್ವ ನಂಜಣ್ಣನವರ್, ಚೈತ್ರಾ ನಾಯ್ಕ, ಸದಾನಂದ ನಾಯ್ಕ, ಪ್ರಕಾಶ ಗೋಸಾವಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು