ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬಜೆಟ್‌ನಲ್ಲಿ ದೂರಗಾಮಿ ಯೋಜನೆಯ ನಿರೀಕ್ಷೆ

ಪ್ರವಾಸೋದ್ಯಮ ಅಭಿವೃದ್ಧಿಗೆ ವಾಟರ್ ಫಾಲ್ಟ್ ಟ್ರೇಲ್, ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ ಸಿಗಲಿ
Last Updated 28 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶಿರಸಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಐವರು ಶಾಸಕರನ್ನು ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಂಬರುವ ಬಜೆಟ್‌ನಲ್ಲಿ ಹೊಸ ಯೋಜನೆಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ದಶಕದ ಈಚೆಗೆ ಜಿಲ್ಲೆಯನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಕೃಷಿ ಕೂಲಿ ಕಾರ್ಮಿಕರ ಕೊರತೆ. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ದೂರಗಾಮಿ ಯೋಜನೆ ರೂಪಿಸಬೇಕಾಗಿದೆ. ಅಡಿಕೆ ತೋಟ ನಿರ್ವಹಣೆ ಕಷ್ಟವಾಗಿ ಅನೇಕರು ತೋಟ ಮಾರಾಟ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಪ್ರಾದೇಶಿಕ ಅಗತ್ಯಕ್ಕೆ ಅನುಗುಣವಾದ ಸಂಶೋಧನೆಗೆ ಸರ್ಕಾರ ನಿರ್ದಿಷ್ಟ ಮೊತ್ತ ಮೀಸಲಿಡಬೇಕಾಗಿದೆ.

‘ಅಡಿಕೆ, ಕಾಳುಮೆಣಸು ಸಂಶೋಧನಾ ಕೇಂದ್ರಗಳಿದ್ದರೂ, ಅವುಗಳಿಂದ ಅಗತ್ಯಕ್ಕುನಗುಣವಾದ ಸಂಶೋಧನೆ ಆಗುತ್ತಿಲ್ಲ. ಹೀಗಾಗಿ ಮಲೆನಾಡಿನ ಅಡಿಕೆ, ಸಾಂಬಾರು ಬೆಳೆಗಾರರು ಬಹುವರ್ಷಗಳಿಂದ ನಿರೀಕ್ಷೆಯಲ್ಲಿರುವ ಆಧುನಿಕ ಯಾಂತ್ರೀಕರಣಕ್ಕೆ ಸರ್ಕಾರ ಅನುದಾನ ನೀಡಬೇಕು. ಮರ ಹತ್ತದೇ, ನೆಲದ ಮೇಲೆ ನಿಂತು ಅಡಿಕೆಗೆ ಔಷಧ ಸಿಂಪರಣೆ ಮಾಡುವ, ಕೊಳೆ ರೋಗ ನಿಯಂತ್ರಿಸುವ ಸಂಶೋಧನೆಗಳ ಬಗ್ಗೆ ಸರ್ಕಾರ ಯೋಚಿಸಬೇಕು. ಸಣ್ಣ ಸಂಸ್ಥೆಗಳಿಗೆ ಇಂತಹ ಕಾರ್ಯ ಭಾರವಾಗುವ ಕಾರಣ ಸರ್ಕಾರವೇ ಇದಕ್ಕೆ ಆಸಕ್ತಿ ತೋರಬೇಕು’ ಎನ್ನುತ್ತಾರೆ ಯುವ ಧುರೀಣ ಶಶಿಭೂಷಣ ಹೆಗಡೆ.

‘ಕುಮಟಾ ತಾಲ್ಲೂಕು ತದಡಿಯಲ್ಲಿರುವ 1200 ಎಕರೆ ಜಾಗದಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಯೋಚಿಸಬಹುದು. ಮಂಗಳೂರು ಮತ್ತು ಗೋವಾ ವಿಮಾನ ನಿಲ್ದಾಣಗಳ ಮಧ್ಯಭಾಗದಲ್ಲಿ ಈ ಸ್ಥಳ ಇರುವುದರಿಂದ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಇದು ಅನುಕೂಲ. ಅಲ್ಲದೇ, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ಕಣ್ಸೆಳೆಯುವ ಹಲವಾರು ಜಲಪಾತಗಳಿವೆ. ಆದರೆ, ಒಂದು ಜಲಪಾತದಿಂದ ಇನ್ನೊಂದು ಜಲಪಾತಕ್ಕೆ ತಲುಪಲು ಸಂಪರ್ಕ ಕೊಂಡಿ ರಸ್ತೆಗಳಿಲ್ಲ. ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ದಿನಕ್ಕೆ ಒಂದೋ ಎರಡೋ ಮಾತ್ರ ಕಡೆ ಭೇಟಿ ನೀಡಲು ಸಾಧ್ಯವಾಗುತ್ತಿದೆ. ‘ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ‘ವಾಟರ್ ಫಾಲ್ಸ್ ಟ್ರೇಲ್’ ಯೋಜನೆ ರೂಪಿಸಬೇಕು. ಇಂತಹುದೊಂದು ಯೋಜನೆ ರೂಪಿತವಾದರೆ, ವಿದೇಶ ಬಂಡವಾಳ ಹೂಡಿಕೆದಾರರು ಅಥವಾ ಸ್ಥಳೀಯ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬರಬಹುದು’ ಎಂದು ಶಶಿಭೂಷಣ ಹೆಗಡೆ ಸಲಹೆ ಮಾಡಿದರು.

‘ಹವಾಮಾನ ಆಧರಿತ ಬೆಳೆವಿಮೆ ಯೋಜನೆಯಡಿ ಶಿರಸಿ ತಾಲ್ಲೂಕಿನ ಎರಡು ಪಂಚಾಯ್ತಿಗಳಿಗೆ ವಿಮೆ ಬಂದಿಲ್ಲ. ಅಲ್ಲದೇ, ಈ ಬಾರಿ ಕೊಳೆರೋಗದಿಂದ ಬೆಳೆ ನೆಲ ಕಚ್ಚಿದೆ. ಕೊಳೆ ಪರಿಹಾರ, ನೆರೆ ಪರಿಹಾರಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು. ರೈತರು ಖರೀದಿಸುವ ಪಶುಆಹಾರಕ್ಕೆ ಸಹಾಯಧನ ನೀಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT