ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾರ್ ತಪ್ಪಿನಿಂದ ಕ್ಷೇತ್ರದ ಜನರಿಗೆ ಶಿಕ್ಷೆ

ಕಾಂಗ್ರೆಸ್ ಮುಖಂಡ ರಮೇಶಕುಮಾರ್ ವಿಷಾದ
Last Updated 23 ನವೆಂಬರ್ 2019, 14:10 IST
ಅಕ್ಷರ ಗಾತ್ರ

ಮುಂಡಗೋಡ: ‘ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಅವರು, ಒಂದೇ ಒಂದು ಸಲ ಶಾಸಕಾಂಗ ಸಭೆಯಲ್ಲಿ ಮಾತನಾಡಿಲ್ಲ. ಪತ್ರವನ್ನೂ ಬರೆದಿಲ್ಲ’ ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ ಕುಮಾರ್ ಆರೋಪಿಸಿದರು.

ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಜನತೆಯ ಕಲ್ಯಾಣಕ್ಕಾಗಿ ರಾಜೀನಾಮೆ ಕೊಡುವುದೇ ಆಗಿದ್ದರೆ, ಯಲ್ಲಾಪುರದಿಂದ ಬೆಂಗಳೂರಿಗೆ ಬರುವ ಬದಲಾಗಿ, ಮುಂಬೈಯಿಂದ ಝೀರೊ ಟ್ರಾಫಿಕ್‌ನಲ್ಲಿ ಬಂದಿದ್ದಾರೆ. ವಿಶೇಷ ವಿಮಾನದಲ್ಲಿ ಬಂದು ರಾಜೀನಾಮೆ ನೀಡಿರುವುದು ನೋಡಿದರೆ, ಈ ಕ್ಷೇತ್ರದ ಮತದಾರರು ಪುಣ್ಯ ಮಾಡಿರಬೇಕು’ ಎಂದು ವ್ಯಂಗ್ಯವಾಡಿದರು.

‘ಅಂದು ಜನಪ್ರತಿನಿಧಿಗಳಿಂದ ರಾರಾಜಿಸಬೇಕಾಗಿದ್ದ ವಿಧಾನಸೌಧ ಸಮವಸ್ತ್ರದಲ್ಲಿದ್ದ ಪೊಲೀಸರಿಂದ ತುಂಬಿದ್ದು ನೋಡಿ ಮನಸ್ಸಿಗೆ ನೋವಾಯಿತು. ಅನರ್ಹಗೊಂಡಿರುವುದು ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನ ಆಗಿದೆ. ಕ್ಷೇತ್ರದ ಜನರು ತಪ್ಪು ಮಾಡದಿದ್ದರೂ, ಮೂರು ತಿಂಗಳಿಂದ ಶಿಕ್ಷೆ ಅನುಭವಿಸುತ್ತಿದ್ದಾರೆ’ ಎಂದರು.

‘ಸಮ್ಮಿಶ್ರ ಸರ್ಕಾರ ಕೇವಲ ಒಂದಿಬ್ಬರಿಂದ ರಚನೆ ಆಗಿರಲಿಲ್ಲ. ಪಕ್ಷದ ಎಲ್ಲ ಶಾಸಕರ ತೀರ್ಮಾನವಾಗಿತ್ತು. ಅದರಲ್ಲಿ ಶಿವರಾಮ ಹೆಬ್ಬಾರ್ ಸಹ ಪಾಲುದಾರ ಆಗಿದ್ದರು. ಆದರೆ ಏಕಾಏಕಿ ರಾಜೀನಾಮೆ ನೀಡಿ ಅಭಿವೃದ್ಧಿಗೋಸ್ಕರ ರಾಜೀನಾಮೆ ನೀಡಿದ್ದೇನೆ ಎನ್ನುತ್ತಿದ್ದಾರೆ. ಯಾವ ಅಭಿವೃದ್ಧಿ, ಎಂತಹ ಯೋಜನೆ ಎಂಬುದು ಮತದಾರರಿಗೆ ಗೊತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ನಾನು ಬುದ್ಧಿವಂತ ಸ್ಪೀಕರ್ ಅಲ್ಲದೇ ಇರಬಹುದು, ಆದರೆ ಸರ್ವಾನುಮತದಿಂದ ಆಯ್ಕೆಯಾದ ಸ್ಪೀಕರ್ ಆಗಿ ಕೆಲಸ ಮಾಡಿದ್ದೇನೆ. ಕೊನೆ ಉಸಿರು ಇರುವವರೆಗೂ ಸಂವಿಧಾನಕ್ಕೆ ನನ್ನ ನಿಷ್ಠೆ ಇರುತ್ತದೆ. ನಿಷ್ಠೆಗೆ ದ್ರೋಹ ಮಾಡುವ ವ್ಯಕ್ತಿ ನಾನಲ್ಲ’ ಎಂದು ಅನರ್ಹ ಶಾಸಕರಿಗೆ ತಿರುಗೇಟು ನೀಡಿದರು. ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ನವ್ಯಶ್ರೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT