ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗ್ರೆ ಹೊಳೆಗೆ ತ್ಯಾಜ್ಯ:ಹಾಲಳ್ಳ ಭಾಗದ ಜನರಿಂದ ಆಕ್ರೋಶ

Last Updated 18 ಡಿಸೆಂಬರ್ 2021, 9:46 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲಳ್ಳದಲ್ಲಿರುವ ಕೋಳಿಫಾರಂ ಸ್ಥಳಾಂತರಿಸುವಂತೆ ಆಗ್ರಹಿಸಿ ಶನಿವಾರ ಸ್ಥಳೀಯರು ಕೋಳಿ ಫಾರಂ ಸಮೀಪ ರಸ್ತೆ ತಡೆ ನಡೆಸಿದರು.

ಹಾಲಳ್ಳ, ಮಣಜವಳ್ಳಿ, ಹುತ್ತಗಾರ, ಇನ್ನಿತರ ಭಾಗದ ಗ್ರಾಮಸ್ಥು ಸೇರಿ ಶಿರಸಿ-ಹುಲೇಕಲ್ ರಸ್ತೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆ ನಡೆಸಿದರು. ಕೋಳಿಫಾರಂನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಫಲಕ ಪ್ರದರ್ಶಿಸಿದರು.

ಸ್ಥಳೀಯರಾದ ಮನು ಹೆಗಡೆ, ‘ಕಳೆದ ಮೂವತ್ತು ವರ್ಷಗಳಿಂದ ಕೋಳಿಫಾರಂ ತ್ಯಾಜ್ಯದಿಂದ ಪರಿಸರ ಕಲುಶಿತಗೊಂಡಿದೆ. ಸಮೀಪದಲ್ಲಿ ಸರ್ಕಾರಿ ಶಾಲೆಯೂ ಇದ್ದು, ಅಲ್ಲಿನ ಬಾವಿಯ ನೀರು ಕಲುಶಿತಗೊಂಡಿದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ’ ಎಂದು ಆರೋಪಿಸಿದರು.

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ‘ಕೋಳಿಫಾರಂ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಬಿಡುತ್ತಿದ್ದು ಇದು ಕೆಂಗ್ರೆ ಹೊಳೆಗೆ ಸೇರುತ್ತಿದೆ. ಹೀಗಾಗಿ ಇಲ್ಲಿಂದ ಶಿರಸಿ ನಗರಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಗುಣಮಟ್ಟದ ಬಗ್ಗೆಯೂ ಆತಂಕ ಎದುರಾಗಿದೆ’ ಎಂದರು.

‘ಜನರಿಗೆ ಆರೋಗ್ಯ ಸಮಸ್ಯೆ ತಂದೊಡ್ಡುತ್ತಿರುವ ಕೋಳಿಫಾರಂ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಹುತ್ತಗಾರ ಗ್ರಾಮ ಪಂಚಾಯ್ತಿ ಪಿಡಿಓ ಜಗದೀಶ ತಳವಾರ, ‘ತ್ಯಾಜ್ಯ ನೀರು ಚರಂಡಿಗೆ ಬಿಡದಂತೆ ಮಾಲೀಕರಿಗೆ ನೊಟೀಸ್ ನೀಡಿದ್ದೇವೆ. ಕೋಳಿಫಾರಂ ಸ್ಥಗಿತಗೊಳಿಸುವ ಸಂಬಂಧ ಈ ಹಿಂದೆಯೂ ಹಲವು ಬಾರಿ ನೊಟೀಸ್ ನೀಡಲಾಗಿತ್ತು. ಸಾರ್ವಜನಿಕರ ದೂರಿನ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದರು.

ಸ್ಥಳೀಯರಾದ ಭಾಸ್ಕರ ಹೆಗಡೆ, ಅಂಜನಾ ಭಟ್, ಸಹನಾ ಹೆಗಡೆ, ಅಭಿರಾಮ ಹೆಗಡೆ, ಪ್ರಕಾಶ ಪೈ, ಗಣಪತಿ ಹೆಗಡೆ, ಪವನಕುಮಾರ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT