ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಎರಡು ತಿಂಗಳ ಬಳಿಕವೂ ಮುಂದುವರಿದ ಪ್ರಹಾರ

ಗಂಗಾವಳಿ ನದಿಯ ಸುತ್ತಮುತ್ತ ಒಣಗುತ್ತಿರುವ ತೋಟಗಳು: ತತ್ತರಿಸಿದ ಬೆಳೆಗಾರ
Last Updated 3 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ಎರಡು ತಿಂಗಳ ಹಿಂದೆ ಉಕ್ಕೇರಿದ್ದ ಗಂಗಾವಳಿಯ ಪ್ರವಾಹವೇನೋ ಇಳಿಯಿತು. ಆದರೆ, ಅದರಿಂದ ತೋಟಗಾರಿಕೆ ಬೆಳೆಗಳಿಗೆ ಆಗಿರುವ ಅನಾಹುತಗಳ ಭೀಕರತೆ ಈಗ ಅರಿವಿಗೆ ಬರುತ್ತಿವೆ. ಅಡಿಕೆ ಸಸಿಗಳು, ಕಾಳುಮೆಣಸಿನ ಬಳ್ಳಿಗಳು ಒಣಗುತ್ತಿದ್ದು, ಕೃಷಿಕರನ್ನು ಚಿಂತೆಗೆ ದೂಡಿದೆ.

ಅಂಕೋಲಾ ಮತ್ತು ಯಲ್ಲಾಪುರ ತಾಲ್ಲೂಕುಗಳ ಗಡಿ ಭಾಗದಲ್ಲಿಗಂಗಾವಳಿ ನದಿಯ ಸಮೀಪದ ನೂರಾರು ಎಕರೆ ಗದ್ದೆಗಳು ನಾಮಾವಶೇಷವಾಗಿವೆ. ಈ ಹಿಂದೆಬೇಸಾಯ ಮಾಡಲಾಗುತ್ತಿತ್ತುಎಂಬ ಯಾವ ಕುರುಹೂ ಈಗ ಸಿಗುತ್ತಿಲ್ಲ. ನೆರೆಯಲ್ಲಿ ಕೊಚ್ಚಿಕೊಂಡು ಬಂದಿದ್ದ ಮರಳು ಮಿಶ್ರಿತ ಮಣ್ಣು ಗದ್ದೆಯಲ್ಲಿ ಮೂರು ನಾಲ್ಕು ಅಡಿಗಳಷ್ಟು ನಿಂತಿದೆ. ಅದನ್ನು ತೆರವು ಮಾಡುವುದು ಕೃಷಿಗಿಂತ ವೆಚ್ಚದಾಯಕ ಎಂದುರೈತರು ಚಿಂತಿತರಾಗಿದ್ದಾರೆ.

ಹುಲ್ಲೂ ಹುಟ್ಟಿಲ್ಲ!:ಮಣ್ಣು ನಿಂತ ಗದ್ದೆಗಳಲ್ಲಿ ಹುಲ್ಲು ಕೂಡ ಹುಟ್ಟಿಲ್ಲ. ಹಾಗಾಗಿ ಜಾನುವಾರಿಗೆ ಮೇವಾದರೂ ಆಗುತ್ತದೆ ಎಂಬ ಆಸೆಯನ್ನೂರೈತರು ಬಿಟ್ಟಿದ್ದಾರೆ.

‘ನದಿಯ ಸಮೀಪದಲ್ಲಿರುವ ಅಡಿಕೆ ತೋಟಗಳ ಬದಿಯಲ್ಲಿಮೂರು ನಾಲ್ಕು ಮೀಟರ್ ವ್ಯಾಪ್ತಿಯಲ್ಲಿದ್ದ ಕಾಡುಮರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ತೋಟಕ್ಕೆ ಈಗ ನೆರಳಿಲ್ಲ. ಬಿಸಿಲಿನ ಹೊಡೆತಕ್ಕೆ ನೆಲ ಒಣಗುತ್ತಿದ್ದು, ಮರಗಳು ಬಾಡುತ್ತಿವೆ. ಹಲವು ತೋಟಗಳಲ್ಲಿ ಸಂಗ್ರಹವಾಗಿರುವ ಕಪ್ಪು ಮಣ್ಣು ಕೊಳೆಯುತ್ತಿದೆ. ಅದು ನೀರನ್ನು ಭೂಮಿಗೆ ಇಂಗಲು ಬಿಡುವುದಿಲ್ಲ. ಇದರಿಂದ ಕಾಳುಮೆಣಸಿನಬಳ್ಳಿ,ಪ್ರವಾಹಕ್ಕೆ ಮೊದಲು ನೆಟ್ಟಿದ್ದ ಸಣ್ಣ ಅಡಿಕೆ ಸಸಿಗಳು ಕೊಳೆತಿವೆ’ ಎನ್ನುತ್ತಾರೆ ಕೋನಾಳದ ಕೃಷಿಕ ಸುಧಾಕರ ಭಟ್.

‘ಆ ಪ್ರದೇಶದಲ್ಲಿ ಮರಗಿಡಗಳು ಮೊದಲಿನಂತೆಬೆಳೆಯಲು20–30 ವರ್ಷಗಳಾದರೂ ಬೇಕು. ಅಲ್ಲಲ್ಲಿ ಒಣಗಿ ನಿಂತಿರುವ ಬಿದಿರಿನ ಹಿಂಡು ನೆರೆಯ ಭೀಕರತೆಯನ್ನು ಇನ್ನೂ ಸಾರುತ್ತಿವೆ. ಡೊಂಗ್ರಿ ಹಾಗೂ ಆಸುಪಾಸಿನ ಗ್ರಾಮಗಳು, ಗುಳ್ಳಾಪುರ, ಶೇವ್ಕಾರ, ಹೆಗ್ಗಾರ, ಕೋನಾಳ, ಹಳುವಳ್ಳಿ, ಕಲ್ಲೇಶ್ವರ, ಕಮ್ಮಾಣಿಯಲ್ಲಿಇಂತಹ ದೃಶ್ಯಗಳು ಸಾಮಾನ್ಯವಾಗಿವೆ’ ಎನ್ನುತ್ತಾರೆ ಕಣ್ಣಿಪಾಲದ ದತ್ತಾತ್ರಯ ಭಟ್.

ತೋಟದಲ್ಲಿ ಐದಾರು ದಿನ ನೀರು ನಿಂತಿತ್ತು. ಆಗ ಗಟ್ಟಿಯಾಗಿದ್ದ ಕಾಳುಮೆಣಸಿನ ಬಳ್ಳಿಗಳು ಈಗ ಹಳದಿ ಬಣ್ಣಕ್ಕೆ ತಿರುಗಿವೆ. ಒಣಗಿ ಗಂಟು ಕಳಚಿ ಬೀಳುತ್ತಿವೆ. ಈಗ ಜವಳು ಮಣ್ಣಿನಿಂದ ಅಡಿಕೆ ಸಸಿಗಳು ಸಾಯುತ್ತಿವೆ.ಇದು ಒಂದು ರೀತಿಯ ಸಮಸ್ಯೆಯಾದರೆ, ಅಡಿಕೆ ತೋಟದಲ್ಲಿ ನಿಯಂತ್ರಣಕ್ಕೇ ಬಾರದ ರೀತಿಯಲ್ಲಿ ಕೊಳೆರೋಗ ವ್ಯಾಪಿಸಿಕೊಂಡಿದೆ. ಕೆಲವು ಕಡೆ ಚೆಂಡೆಕೊಳೆಯೂ ಸೇರಿಕೊಂಡು ಕೃಷಿಕರು ಕಂಗಾಲಾಗಿದ್ದಾರೆ.

ಪರಿಹಾರ ವಿತರಣೆ:ಪ್ರವಾಹದಿಂದ ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿಯ ಬಗ್ಗೆ ಸಮೀಕ್ಷೆ ಮಾಡಿ ಕಂದಾಯ ಇಲಾಖೆಗೆ ವರದಿ ನೀಡಲಾಗಿದೆ.ಅಂಕೋಲಾ ತಾಲ್ಲೂಕಿನಲ್ಲಿ ಒಟ್ಟು580 ಕೃಷಿಕರ ಹೆಸರನ್ನು ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ ‘ಪರಿಹಾರ’ ತಂತ್ರಜ್ಞಾನಕ್ಕೆ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದಾರೆ. ಹಲವರಿಗೆ ಈಗಾಗಲೇ ಸಿಕ್ಕಿದೆ. ದಾಖಲೆಗಳನ್ನು ಕೊಡದವರಿಗೆ ಪರಿಹಾರ ಸಿಗದು. ಕೊಳೆರೋಗದಿಂದಆಗಿರುವ ಹಾನಿಗೆ ಪರಿಹಾರ ಶೀಘ್ರವೇ ಬರಲಿದೆ ಎಂದುತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚೇತನ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT