ಬುಧವಾರ, ಜೂನ್ 16, 2021
28 °C
ಕಾರವಾರದಲ್ಲಿ ಕೆಲವು ವರ್ತಕರಿಗೆ ದಂಡ ವಿಧಿಸಿದ ಪೊಲೀಸರು

ಲಾಕ್‌ಡೌನ್ ನಿಯಮ ಮೀರಿದ ವಾಹನಗಳ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲೂ ಲಾಕ್‌ಡೌನ್ ನಿಯಮಗಳನ್ನು ಸೋಮವಾರದಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ನಗರದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪೊಲೀಸರು ರಸ್ತೆಗಳಲ್ಲಿ ಬಿಗಿ ಬಂದೊಬಸ್ತ್ ಮಾಡಿದ್ದಾರೆ. ಅನಗತ್ಯವಾಗಿ ಸಂಚರಿಸುತ್ತಿದ್ದ ಸುಮಾರು 50 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಅಂತೆಯೇ ಕೋವಿಡ್ ನಿಯಮಾವಳಿಗಳನ್ನು ಪಾಲಿಸದ ವರ್ತಕರಿಗೆ ದಂಡವನ್ನೂ ವಿಧಿಸಿದ್ದಾರೆ.

ನಗರದ ಹಬ್ಬುವಾಡ ರಸ್ತೆ, ಗ್ರೀನ್‌ಸ್ಟ್ರೀಟ್, ಕೋಡಿಬಾಗ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸರ್ಕಾರವು ನಿಯಮಾವಳಿಯಲ್ಲಿ ವಿನಾಯಿತಿ ನೀಡಿದವರನ್ನು ಹೊರತುಪಡಿಸಿ ಮತ್ಯಾರೂ ವಿನಾ ಕಾರಣ ಸಂಚರಿಸದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.

ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ, ಸಿ.ಪಿ.ಐ ಸಂತೋಷ ಶೆಟ್ಟಿ, ನಗರಠಾಣೆ ಇನ್‌ಸ್ಪೆಕ್ಟರ್ ಸಂತೋಷಕುಮಾರ, ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ರೇವಣಸಿದ್ದಪ್ಪ, ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಜಕ್ಕಣ್ಣನವರ್ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿಯ ತಂಡ ಬೆಳಿಗ್ಗೆ 6 ಗಂಟೆಯಿಂದಲೇ ವಾಹನಗಳನ್ನು ತಡೆದು ಸಕಾರಣಗಳಿದ್ದರೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

ಅನಗತ್ಯವಾಗಿ ಸಂಚರಿಸುವವರನ್ನು ಪೊಲೀಸರು ಕೆಲವು ದಿನಗಳಿಂದ ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಭಾನುವಾರ ಒಂದೇ ದಿನ 243 ವಾಹನಗಳನ್ನು ಜಪ್ತಿ ಮಾಡಿ ₹ 1,17,200 ದಂಡ ವಸೂಲಿ ಮಾಡಿದ್ದರು. ಜಪ್ತಿ ಮಾಡಿದ ವಾಹನಗಳನ್ನು ಮುಂದಿನ 40 ದಿನಗಳವರೆಗೆ ವಾಪಸ್ ಕೊಡುವ ಸಾಧ್ಯತೆಯಿಲ್ಲ ಎಂದೂ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಎಚ್ಚರಿಕೆ ನೀಡಿದ್ದರು.

ಆರಂಭದಲ್ಲಿ ಜನದಟ್ಟಣೆ:

ಲಾಕ್‌ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6ರಿಂದ 10ರ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಆದರೆ, ವಾಹನಗಳನ್ನು ತರುವಂತಿಲ್ಲ, ನಡೆದುಕೊಂಡೇ ಬರಬೇಕು ಎಂದು ಸರ್ಕಾರ ಆದೇಶಿಸಿದೆ. ಅದರಂತೆ, ನಾಗರಿಕರು ವಾಹನಗಳನ್ನು ಮನೆಗಳಲ್ಲೇ ಇಟ್ಟು ಬಂದಿದ್ದರು. ಹಲವು ದಿನಸಿ ಅಂಗಡಿಗಳ ಎದುರು ಜನದಟ್ಟಣೆಯೂ ಕಂಡುಬಂತು. 10 ಗಂಟೆಯಾಗುತ್ತಿದ್ದಂತೆ ನಗರವಿಡೀ ಸ್ತಬ್ಧವಾಯಿತು. ಜನ ಸಂಚಾರವಿಲ್ಲದೇ ರಸ್ತೆಗಳೆಲ್ಲ ಬಿಕೊ ಎಂದವು.

ವಾಹನಗಳನ್ನು ಮನೆಗಳಲ್ಲೇ ಬಿಟ್ಟು ನಡೆದುಕೊಂಡೇ ಬರಬೇಕು ಎಂಬ ನಿಯಮಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರವಾರದಂಥ ನಗರಗಳಲ್ಲಿ ವಸತಿ ಪ್ರದೇಶದಲ್ಲಿ ಅಂಗಡಿಗಳಿಲ್ಲ. ವಾಣಿಜ್ಯ ವ್ಯವಹಾರಗಳಿರುವ ನಗರ ಕೇಂದ್ರಕ್ಕೆ ಮೂರು ಕಿಲೋಮೀಟರ್ ದೂರವಾಗುತ್ತದೆ. ಯುವಕರೇನೋ ನಡೆದುಕೊಂಡು ಹೋಗಿ ಬರಬಹುದು. ಆದರೆ, ವಯಸ್ಸಾದವರು, ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು ತಲೆಹೊರೆಯಲ್ಲಿ ತರುವುದು ಕಷ್ಟ ಸಾಧ್ಯವಾಗಿದೆ.

ಮಲೆನಾಡಿನ ಹಳ್ಳಿಗಳ ಕೆಲವು ಮನೆಯವರು ಒಂದು ಲೀಟರ್ ಹಾಲಿಗೂ ನಾಲ್ಕೈದು ಕಿಲೋಮೀಟರ್ ಹೋಗಬೇಕಿದೆ. ಹಾಗಾಗಿ ವಾಹನಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂಬುದು ಹಲವರ ಒತ್ತಾಯವಾಗಿದೆ.

ಗಡಿಗಳಲ್ಲಿ ತಪಾಸಣೆ:

ರಾಜ್ಯದ ಗಡಿ ಕಾರವಾರ ತಾಲ್ಲೂಕಿನ ಮಾಜಾಳಿ ಮತ್ತು ಜೊಯಿಡಾ ತಾಲ್ಲೂಕಿನ ಅನಮೋಡ ಚೆಕ್‌ಪೋಸ್ಟ್‌ಗಳಲ್ಲಿ ಹೊರರಾಜ್ಯಗಳಿಂದ ಬರುವವರ ತಪಾಸಣೆ ಮಾಡಲಾಗುತ್ತಿದೆ. ಅವರ ಕೈಗೆ ಕ್ವಾರಂಟೈನ್ ಮುದ್ರೆಯೊತ್ತಿ ಜಿಲ್ಲೆಯೊಳಗೆ ಸೇರಿಸಿಕೊಳ್ಳಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು