ಬುಧವಾರ, ಅಕ್ಟೋಬರ್ 21, 2020
25 °C
ಅವೈಜ್ಞಾನಿಕ ಯೋಜನೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ: ಆತಂಕ

ಕಾಳಿ ನದಿ ತಿರುವು ಪ್ರಸ್ತಾವಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಜೀವನದಿ ಕಾಳಿಯ ಹರಿವಿನ ದಿಕ್ಕನ್ನು ಬದಲಿಸಿ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಿಗೆ ಜೋಡಿಸುವ ಪ್ರಸ್ತಾವಕ್ಕೆ ಆರಂಭದಲ್ಲೇ ತೀವ್ರ ವಿರೋಧ ಕೇಳಿಬಂದಿದೆ. ಈ ಯೋಜನೆ ಅವೈಜ್ಞಾನಿಕವಾಗಿದ್ದು, ಪರಿಸರ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸಂಬಂಧ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರುನಾಡು ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎನ್.ದತ್ತಾ, ‘ಸಂಗಮೇಶ ನಿರಾಣಿ ಅವರು ಬೆಳಗಾವಿಯಲ್ಲಿ ಎರಡು ದಿನಗಳ ಹಿಂದೆ ನಡೆದ ವಿಚಾರಗೋಷ್ಠಿಯಲ್ಲಿ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಇದು ಏಕಪಕ್ಷೀಯವಾಗಿದೆ. ಈ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಮೇಲೆ ಹಾಗೂ ಪರಿಸರದ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ಆಲೋಚಿಸಿದಂತೆ ಕಂಡುಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳಗಾವಿ ಜಿಲ್ಲೆಯಲ್ಲಿ ಐದು ನದಿಗಳು ಹರಿದರೂ ಆ ಜಿಲ್ಲೆಯನ್ನು ಬರಗಾಲ ಕಾಡುತ್ತದೆ. ಮಹಾರಾಷ್ಟ್ರದಲ್ಲಿ ಜಾಸ್ತಿ ಮಳೆಯಾದರೆ ಆ ಜಿಲ್ಲೆಯಲ್ಲಿ ಪ್ರವಾಹವಾಗುತ್ತದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುವ ಕ‌ಬ್ಬಿಗೆ ನೀರು ಬೇಕು. ಕಾಳಿ ನದಿಯನ್ನು ಮಲಪ್ರಭಾ ಮತ್ತು ಘಟಪ್ರಭಾ ನದಿಗಳಿಗೆ ಜೋಡಿಸಿ ಜನರ ಕುಡಿಯುವ ನೀರಿಗೆ ಬಳಕೆ ಮಾಡಲಾರರು. ಅದರ ಬದಲು ಮತ್ತಷ್ಟು ಕಬ್ಬು ಬೆಳೆಯಲು ಸಕ್ಕರೆ ಕಾರ್ಖಾನೆಗಳು ಮಾಡಿರುವ ಲಾಬಿ ಇದರ ಹಿಂದೆ ಇದೆ’ ಎಂದು ಆರೋಪಿಸಿದರು.

‘ಕಾಳಿ ನದಿಯ ಉಗಮ ಸ್ಥಾನ ಜೊಯಿಡಾ ತಾಲ್ಲೂಕಿನ ಡಿಗ್ಗಿಯಿಂದ ಕಾರವಾರದಲ್ಲಿ ಸಮುದ್ರಕ್ಕೆ ಸೇರುವವರೆಗೆ ಐದು ಅಣೆಕಟ್ಟುಗಳಿವೆ. ಮೂರು ಕಡೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕೈಗಾ ಅಣು ವಿದ್ಯುತ್ ಸ್ಥಾವರವೂ ಇದೇ ನದಿಯ ತಟದಲ್ಲಿದೆ. ಕಾಳಿ ಹುಲಿ ಯೋಜನೆ, ಅಪರೂಪದ ಜಲಚರಗಳು, ನದಿಯ ಇಕ್ಕೆಲಗಳಲ್ಲಿ ಅಪಾರ ವನ್ಯಜೀವಿಗಳು ವಾಸಿಸುತ್ತಿವೆ. ನದಿ ಜೋಡಣೆ ಯೋಜನೆಯಿಂದ ಇವೆಲ್ಲವುಗಳಿಗೆ ತೊಂದರೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು. 

‘ನದಿಯಲ್ಲಿ 100 ಟಿ.ಎಂ.ಸಿ ಅಡಿಗಳಷ್ಟು ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ ಎಂದು ಕೆಲವರು ವಾದ ಮುಂದಿಟ್ಟಿದ್ದಾರೆ. ಅವರೆಲ್ಲ ಟಿಎಂಸಿ ಎಂದರೆಷ್ಟು ಎಂದು ಸರಿಯಾಗಿ ತಿಳಿದುಕೊಳ್ಳಲಿ. ಅಷ್ಟಕ್ಕೂ ಕಾಳಿ ನದಿಯ ನೀರು ಸಮುದ್ರಕ್ಕೆ ಸೇರುವುದರಿಂದ ವ್ಯರ್ಥವಾಗುವುದಿಲ್ಲ. ಸಮುದ್ರದ ಉಪ್ಪು ನೀರನ್ನು ಹಿಮ್ಮೆಟ್ಟಿಸಿ ಕುಡಿಯುವ ನೀರನ್ನು ಒದಗಿಸುತ್ತಿದೆ. ಜೊಯಿಡಾ, ದಾಂಡೇಲಿ, ರಾಮನಗರ ಸುತ್ತಮುತ್ತ ಇಂದಿಗೂ ಕುಡಿಯುವ ನೀರಿನ ಸಮಸ್ಯೆಯಿದೆ. ಅದನ್ನು ಬಗೆಹರಿಸಲು ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು. 

‘ಕಾರ್ಖಾನೆ ಉಳಿಸಿಕೊಳ್ಳಲು ಯೋಜನೆ?’

‘ಘಟಪ್ರಭಾ, ಮಲಪ್ರಭಾ ನದಿಗಳ ಸುತ್ತ ಕುಡಿಯುವ ನೀರಿನ ಸಮಸ್ಯೆಯಿದ್ದರೆ ಅಲ್ಲಲ್ಲಿ ಕಿರು ಅಣೆಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಿ. ಕೆರೆಗಳನ್ನು ಅಭಿವೃದ್ಧಿ ಮಾಡಲಿ. ಕಾಡು ಅಭಿವೃದ್ಧಿ ಮಾಡಲಿ. ಈ ಯೋಜನೆಯನ್ನು ಪ್ರಸ್ತಾಪ ಮಾಡಿದ ಸಂಗಮೇಶ್ ನಿರಾಣಿ, ತಮ್ಮ ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳಲು ಈ ಯೋಜನೆಯ ಬಗ್ಗೆ ಚಿಂತಿಸಿದ್ದಾರೋ ಅಥವಾ ಇದೊಂದು ರಾಜಕೀಯ ಷಡ್ಯಂತ್ರವೋ ಗೊತ್ತಿಲ್ಲ. ಏನೇ ಆದರೂ ಕಾಳಿ ನದಿಯ ಹರಿವನ್ನು ಬದಲಿಸಲು ನಾವು ಅವಕಾಶ ಕೊಡಲಾರೆವು’ ಎಂದು ಎನ್.ದತ್ತಾ ಹೇಳಿದರು.

ಮುಖಂಡರಾದ ದೀಪಕ್ ಕುಡಾಳ್ಕರ್, ಆನಂದ ಮಡಿವಾಳ, ಮದನ ಗುನಗಿ ಹಾಗೂ ಮಂಗೇಶ ನಾಯ್ಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು