ಶುಕ್ರವಾರ, ಫೆಬ್ರವರಿ 21, 2020
21 °C
ಕಾಮಗಾರಿ ಪೂರ್ಣಗೊಂಡ ಮೇಲೆ ಹಟ್ಟಿಕೇರಿ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯರಿಂದ ಸುಂಕ ವಸೂಲಿ

ಟೋಲ್ ಶುಲ್ಕ ವಸೂಲಿ ವಿರೋಧಿಸಿ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಟ್ಟಿಕೇರಿಯಲ್ಲಿ ಟೋಲ್ ಶುಲ್ಕ ವಸೂಲಿ ಮಾಡುವುದನ್ನು ವಿರೋಧಿಸಿ ಟಿಪ್ಪರ್, ಕಾರು ಹಾಗೂ ಟೆಂಪೊ ಯೂನಿಯನ್ ಪ್ರಮುಖರು ಮಂಗಳವಾರ ಪ್ರತಿಭಟಿಸಿದರು. ಟೋಲ್ ಪ್ಲಾಜಾಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮುದಗಾ, ಚೆಂಡಿಯಾ, ಅರ್ಗಾ ಮತ್ತು ಅಮದಳ್ಳಿ, ಶಿರೂರು ಗ್ರಾಮದ ಭಾಗಗಳಲ್ಲಿ ಕಾಮಗಾರಿಯು ಪೂರ್ಣಗೊಂಡಿಲ್ಲ. ಹೀಗಿರುವಾಗ ಏಕಾಏಕಿ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಸುಂಕ ವಸೂಲಾತಿಗೆ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೆ.ಪಿ.ಸಿ.ಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ, ‘ಸಣ್ಣಪುಟ್ಟ ಉದ್ಯೋಗದ ನಿಮಿತ್ತ ಅಂಕೋಲಾದಿಂದ ಕಾರವಾರಕ್ಕೆ ದಿನಕ್ಕೆ 100ಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಸಮರ್ಪಕವಾಗಿ ರಸ್ತೆಯು ಸಹ ಆಗದೇ ಟೋಲ್ ಸುಂಕ ವಿಧಿಸುವುದು ಸರಿಯಲ್ಲ. ಆದ್ದರಿಂದ ಸ್ಥಳೀಯರಿಗೆ ಸುಂಕದಿಂದ ವಿನಾಯಿತಿ ನೀಡಿ’ ಎಂದು ಆಗ್ರಹಿಸಿದರು.

ಐ.ಆರ್‌.ಬಿ ಅಧಿಕಾರಿ ಮೂರ್ತಿ ಮಾತನಾಡಿ, ‘ಈಗಾಗಲೇ ಶೇ 75ರಷ್ಟು ಕಾಮಗಾರಿ ಪೂರ್ತಿಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ಟೋಲ್ ಸುಂಕ ವಸೂಲಿ ಮಾಡಲಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದರು.

‘ಸ್ಥಳೀಯರಿಗೆ ಸದ್ಯಕ್ಕೆ ವಿನಾಯಿತಿ’: ಪ್ರತಿಭಟನಾಕಾರರ ಆಕ್ರೋಶಕ್ಕೆ ಐ.ಆರ್.ಬಿ ಕಂಪನಿಯ ಅಧಿಕಾರಿಗಳು ಮಣಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ ಮೂರ್ತಿ, ‘ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ನೀಡುತ್ತೇವೆ. ಕಾಮಗಾರಿ ಪೂರ್ಣಗೊಂಡ ಮೇಲೆ ಸುಂಕ ವಸೂಲಿ ಮಾಡಲಾಗುವುದು’ ಎಂದು ಹೇಳಿದರು. 

ಸ್ಥಳಕ್ಕೆ ಬಂದ ಕುಮಟಾ ಉಪವಿಭಾಗಾಧಿಕಾರಿ ಅಜಿತ್, ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಎರಡು ದಿನಗಳ ಒಳಗೆ ಐ.ಆರ್‌.ಬಿ ಕಂಪನಿ ಮತ್ತು ಸಂಘಟನೆಯ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರ ಜೊತೆ ವಿಶೇಷ ಸಭೆ ನಡೆಸಲಾಗುವುದು. ಸಮಸ್ಯೆಯ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವದು ಎಂದು ಭರವಸೆ ನೀಡಿದರು.

ಕೈಕೊಟ್ಟ ‘ಫಾಸ್ಟ್ ಟ್ಯಾಗ್’: ಹೊನ್ನಾವರ ತಾಲ್ಲೂಕಿನ ಹೊಳೆಗದ್ದೆ ಟೋಲ್‌ ಪ್ಲಾಜಾದಲ್ಲಿ ಕೂಡ ಮಂಗಳವಾರ ಸಾರ್ವಜನಿಕರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಫಾಸ್ಟ್ ಟ್ಯಾಗ್’ ಮೂಲಕ ಹಣ ವಸೂಲಿ ಮಾಡುವ ಯಂತ್ರವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದ ಒಂದೊಂದು ವಾಹನದ ಪ್ರಯಾಣಕ್ಕೆ ಅನುಮತಿ ನೀಡಲು ಹತ್ತಾರು ನಿಮಿಷಗಳು ಬೇಕಾದವು. ಅಷ್ಟರಲ್ಲಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಚಾಲಕರು, ಸವಾರರು ತಾಳ್ಮೆ ಕಳೆದುಕೊಂಡು ವಾಗ್ವಾದ ಮಾಡುತ್ತಿದ್ದ ಸನ್ನಿವೇಶಗಳು ಕಂಡವು.

ಈ ಸಂದರ್ಭದಲ್ಲಿ ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ಗಣಪತಿ ಮೂಲಮನೆ, ಸೂರಜ್ ನಾಯಕ ವಂದಿಗೆ, ಟೆಂಪೊ ಯೂನಿಯನ್‍ ಅಧ್ಯಕ್ಷ ಬಾಳಣ್ಣ ನಾಯ್ಕ, ಕಾರು ಹಾಗೂ ಟ್ಯಾಕ್ಸಿ ಮಾಲೀಕರ– ಚಾಲಕರ ಸಂಘದ ಅಧ್ಯಕ್ಷ ಪ್ರವೀಣ ನಾಯ್ಕ, ತುಳಸಿದಾಸ ಕಾಮತ, ರವಿ ನಾಯಕ ವಂದಿಗೆ, ವಿಶಾಲ ನಾಯಕ, ಮಂಜು ಕಳಸ, ನಿತ್ಯಾನಂದ ನಾಯಕ, ಮೋಹಿನಿ ನಾಯ್ಕ, ಮಾರುತಿ ನಾಯ್ಕ, ಜೀವನ ನಾಯ್ಕ ಅಡ್ಲೂರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು