ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಯಿಖಾನೆ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ಬೀಗ ಹಾಕಲು ಮುಂದಾದಾಗ ಪುರಸಭೆ ಸದಸ್ಯೆ, ಗಲ್ಲಿ ನಿವಾಸಿಗಳ ಆಕ್ಷೇಪ
Last Updated 9 ಮಾರ್ಚ್ 2022, 15:44 IST
ಅಕ್ಷರ ಗಾತ್ರ

ಹಳಿಯಾಳ: ಪಟ್ಟಣದ ದಲಾಯತ್ ಗಲ್ಲಿಯಲ್ಲಿರುವ ಅಕ್ರಮ ಕಸಾಯಿಖಾನೆಯನ್ನು ಕೂಡಲೇ ತೆರವು ಮಾಡಬೇಕು ಎಂದು ಪುರಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು, ದಲಾಯತ್ ಗಲ್ಲಿ ಹಾಗೂ ಮೇದಾರ ಗಲ್ಲಿಯ ನಾಗರಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಕಸಾಯಿಖಾನೆಯನ್ನು ತೆರವುಮಾಡುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದರೂ ಸಾಮಾನ್ಯ ಸಭೆಯ ನಡಾವಳಿಯಲ್ಲಿ ವಿಷಯ ಪ್ರಸ್ತಾಪವಾಗಲಿಲ್ಲ ಎಂದು ಆರೋಪಿಸಿದರು. ಬುಧವಾರ ಪುರಸಭೆಯ ತಿಂಗಳ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಮೆರವಣಿಗೆ ಮೂಲಕ ತೆರಳಿದರು. ಕಸಾಯಿಖಾನೆ ಹತ್ತಿರ ಪ್ರತಿಭಟನೆ ನಡೆಸಿ, ವಾಹನ ಸಂಚಾರ ತಡೆದರು. ಟೈರ್ ಸುಡಲು ಪ್ರಯತ್ನಿಸಿದಾಗ ಪೊಲೀಸರು ತಡೆದರು.

ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಪರಿಸರ ಎಂಜಿನಿಯರ್ ಪ್ರತಿಭಟನಾಕಾರರ ಬಳಿಗೆ ತೆರಳಿ ಸಮಜಾಯಿಷಿ ನೀಡಿದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸಲಿಲ್ಲ. ಈ ಕೂಡಲೇ ಕಸಾಯಿಖಾನೆಯನ್ನು ತೆರವು ಮಾಡುವಂತೆ ಆಗ್ರಹಿಸಿದರು.

ಈ ನಡುವೆ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಹಿರಿಯ ಅಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಕಸಾಯಿಖಾನೆಗೆ ತೆರಳಿ ಬೀಗ ಹಾಕಲು ಮುಂದಾದರು. ಆಗ ಪುರಸಭೆಯ ಕಾಂಗ್ರೆಸ್‌ ಬೆಂಬಲಿತ ಸದಸ್ಯೆ ಮುಸರತ್ ಬಸ್ಸಾಪುರ ಪ್ರತಿಭಟನೆ ಆರಂಭಿಸಿದರು. ಕಸಾಯಿಖಾನೆಗೆ ಬೀಗ ಹಾಕುವ ಮೊದಲು ಪುರಸಭೆ ನಿಯಮಾವಳಿ ಪ್ರಕಾರ ಕಾನೂನು ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.

ನಂತರ ಪುನಃ ಮುಖ್ಯಾಧಿಕಾರಿ ಪುರಸಭೆಗೆ ತೆರಳಿ ನೋಟಿಸ್‌ ಸಿದ್ಧಪಡಿಸಿಕಸಾಯಿಖಾನೆಗೆ ತೆರಳಿದರು. ಆಗ ದಲಾಯತ ಗಲ್ಲಿಯ ಮುಸ್ಲಿಂ ಮಹಿಳೆಯರು ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿ ಮತ್ತಷ್ಟು ಬಿಗುವಾಗುತ್ತಿದ್ದಾಗ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಮನವೊಲಿಸಿದರು. ಬಳಿಕ ಕಸಾಯಿಖಾನೆಯನ್ನು ಪುರಸಭೆಯ ವಶಕ್ಕೆ ಪಡೆಯಲಾಯಿತು.

ಸದಸ್ಯೆ ಮುಸರತ್‌ ಬಸ್ಸಾಪುರ, ‘ಈ ಹಿಂದೆ ಕಸಾಯಿಖಾನೆಗೆ ಪರ್ಯಾಯ ವ್ಯವಸ್ಥೆಯಾಗಿ ಗುಡ್ಡಾಪುರದ ಬಸ್ ಡಿಪೊದ ಹತ್ತಿರ ಐದು ಗುಂಟೆ ಜಮೀನನ್ನು ಪುರಸಭೆಯಿಂದ ನೀಡಲಾಗಿತ್ತು. ಕೂಡಲೇ ಆ ಜಮೀನನ್ನು ಕಸಾಯಿಖಾನೆ ಮಾಡುವವರಿಗೆ ಹಸ್ತಾಂತರಿಸಬೇಕು. ಪರ್ಯಾಯ ವ್ಯವಸ್ಥೆ ಆಗುವ ತನಕ ಈಗಿರುವ ಕಸಾಯಿಖಾನೆಯನ್ನು ಮುಚ್ಚಬಾರದು’ ಎಂದು ಆಗ್ರಹಿಸಿದರು.

ಪುರಸಭೆಯ ಬಿ.ಜೆ.ಪಿ ಸದಸ್ಯರಾದ ಉದಯ ಹೂಲಿ, ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಸಂಗೀತಾ ಜಾಧವ, ರಾಜೇಶ್ವರಿ ಹಿರೇಮಠ, ಶಾಂತಾ ಹಿರೇಕರ, ಉಮೇಶ ದೇಶಪಾಂಡೆ, ಹನುಮಂತ ಚಲುವಾದಿ, ಮಾಲಾ ಹುಂಡೇಕರ, ಮುಖಂಡರಾದ ಅನಿಲ್ ಮುತ್ನಾಳ, ರತ್ನಮಾಲಾ ಮುಳೆ, ನಾಗರಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT