ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಸಾರ್ವಜನಿಕರಿಗೂ ಮರಳು ಪೂರೈಕೆಗೆ ನಿರ್ಧಾರ

ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದವರ ‍ಪರವಾನಗಿ ರದ್ದು ಪಡಿಸುವ ಎಚ್ಚರಿಕೆ
Last Updated 5 ನವೆಂಬರ್ 2020, 13:36 IST
ಅಕ್ಷರ ಗಾತ್ರ

ಕಾರವಾರ: ಮರಳು ದಾಸ್ತಾನು ಕೇಂದ್ರಗಳಿಂದ ಇನ್ನುಮುಂದೆ ಸಾರ್ವಜನಿಕರ ಕಾಮಗಾರಿಗಳಿಗೂ ಪೂರೈಕೆ ಮಾಡಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನಿರ್ಧರಿಸಿದೆ. ಅಲ್ಲದೇ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ, ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮರಳು ಸಿಗುತ್ತಿಲ್ಲ. ಸಿಕ್ಕಿದರೂ ದುಪ್ಪಟ್ಟು ಬೆಲೆ ತೆರಬೇಕಾಗಿದೆ ಎಂಬ ಕೂಗು ಪದೇ ಪದೇ ಕೇಳಿ ಬರುತ್ತಿದೆ. ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಅನುಮತಿ ಪಡೆದಿರುವ ಗುತ್ತಿಗೆದಾರರು (ಟಿ.ಪಿ.ದಾರರು) ಅಥವಾ ಸಾಗಾಣಿಕೆದಾರರು ಸಾರ್ವಜನಿಕರಿಂದ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರುವದು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಗಮನಕ್ಕೆ ಬಂದಿದೆ. ಇದನ್ನು ನಿಯಂತ್ರಿಸುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮರಳು ದಾಸ್ತಾನು ಕೇಂದ್ರಗಳಿಂದ ಈ ಮೊದಲು ಸರ್ಕಾರಿ ಉದ್ದೇಶದ ಕಾಮಗಾರಿಗಳಿಗೆ ಮಾತ್ರ ಪೂರೈಸಲು ನಿರ್ಧರಿಸಲಾಗಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ನಿಯಮದಲ್ಲಿ ಬದಲಾವಣೆ ಮಾಡಲಾಗುವುದು. ಸಾರ್ವಜನಿಕರು ತಮಗೆ ಅವಶ್ಯವಿರುವ ಮರಳಿನ ಪ್ರಮಾಣವನ್ನು ಸಹಾಯವಾಣಿ ಸಂಖ್ಯೆ 81235 99266ಗೆ ತಿಳಿಸಬಹುದು. ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯು ಮರಳಿಗೆ ಅನ್ವಯಿಸುವ ದರವನ್ನು ನಿಗದಿಪಡಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮರಳು ಖರೀದಿದಾರರು ಈ ಮೊತ್ತವನ್ನು ತಾಲ್ಲೂಕು ಉಸ್ತುವಾರಿ ಸಮಿತಿ ಸೂಚಿಸುವ ಪೂರೈಕೆದಾರರಿಗೆ ನೇರವಾಗಿ ಪಾವತಿಸಬೇಕು. ನಂತರ ಅವರಿಗೆ ಮರಳು ವಿತರಿಸಲು ಕ್ರಮ ಜರುಗಿಸಲಾಗುವುದು. ಇದರಿಂದಾಗಿ ಸಾಮಾನ್ಯ ನಾಗರಿಕರಿಗೂ ಯೋಗ್ಯ ದರದಲ್ಲಿ ಮರಳು ಲಭಿಸಲಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಮರಳು ದಾಸ್ತಾನು ಕೇಂದ್ರ:ಜಿಲ್ಲೆಯ ಸಾಮಾನ್ಯ ನಾಗರಿಕರಿಗೂ ಯೋಗ್ಯದರದಲ್ಲಿ ಮರಳು ಸಿಗುವಂತೆ ನೋಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಜಿಲ್ಲೆಯ ಅಂಕೋಲಾ, ಶಿರಸಿ, ದಾಂಡೇಲಿ, ಹೊನ್ನಾವರ, ಭಟ್ಕಳ ಹಾಗೂ ಹಳಿಯಾಳ ತಾಲ್ಲೂಕುಗಳಲ್ಲಿ ಮರಳು ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮರಳು ದಾಸ್ತಾನು ಕೇಂದ್ರಗಳನ್ನು ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯ ಮೇಲುಸ್ತುವಾರಿಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ನಿರ್ವಹಿಸುತ್ತದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರು ನೀಡಲು ಅವಕಾಶ:ಯಾರಾದರೂ ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡಿದರೆ ಸಾರ್ವಜನಿಕರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ 08382 229857 ಅಥವಾ ವಾಟ್ಸ್‌ಆ್ಯಪ್ ದೂರು ಸಂಖ್ಯೆ 94835 11015ಕ್ಕೆ ದೂರು ಸಲ್ಲಿಸಬಹುದು. ಆಯಾ ತಾಲ್ಲೂಕಿಗೆ ಸಂಬಂಧಿಸಿದ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದು. ಈ ಕುರಿತಂತೆ ಎಲ್ಲ ಉಪ ವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT