ಶಿರಸಿ: ಸಂಪರ್ಕ ತಪ್ಪಿಸಿದ ಉಕ್ಕಿದ ನದಿ

ಶಿರಸಿ: ವರುಣನ ರೌದ್ರವತೆಗೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಶುಕ್ರವಾರ ನಲುಗಿದವು. ಪ್ರಮುಖ ನದಿಗಳು ಉಕ್ಕೇರಿ ಕೃಷಿಭೂಮಿಯನ್ನು ಆವರಿಸಿಕೊಂಡವು. ಹಲವೆಡೆ ಮನೆಗಳು ಕುಸಿದು ಬಿದ್ದವು. ನದಿಪಾತ್ರದ ಮನೆಗಳು ಜಲಾವೃತವಾಗಿದ್ದವು.
ಗುರುವಾರದಿಂದ ಎಡಬಿಡದೆ ಸುರಿದ ಮಳೆ ಅವಾಂತರ ಸೃಷ್ಟಿಸಿದೆ. ಒಂದು ದಿನದ ಅವಧಿಯಲ್ಲಿ ತಾಲ್ಲೂಕಿನಲ್ಲಿ ಸರಾಸರಿ 24 ಸೆಂ.ಮೀ. ಮಳೆ ಸುರಿದಿದೆ. ಹುಲೇಕಲ್‍ನಲ್ಲಿ ದಾಖಲೆಯ 32 ಸೆಂ.ಮೀ. ಮಳೆಯಾಗಿದೆ.
ವರದಾ ನದಿ ಉಕ್ಕಿ ಭಾಶಿ ಗ್ರಾಮ ಪಂಚಾಯ್ತಿಯ ಮೊಗವಳ್ಳಿ ಗ್ರಾಮದಲ್ಲಿ ನೆರೆ ಸ್ಥಿತಿ ಉಂಟಾಯಿತು. ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಜನರನ್ನು ಹೊಸಕೇರಿಯಲ್ಲಿ ತೆರೆದ ಕಾಳಜಿಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ರೇವಣಕಟ್ಟಾದಲ್ಲಿ ಅಘನಾಶಿನಿ ನದಿಯ ಆರ್ಭಟ ಹೆಚ್ಚಿದ ಪರಿಣಾಮ ನೆರೆ ಹಾವಳಿ ಸಮಸ್ಯೆ ಎದುರಾಯಿತು. ಇಲ್ಲಿನ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ. ಇಲ್ಲೂ ಕಾಳಜಿಕೆಂದ್ರ ತೆರೆಯಲಾಗಿದೆ.
ಮಾದ್ನಕಳ್, ಮಾರಿಗದ್ದೆ, ಸರಕುಳಿ ಸೇತುವೆಗಳ ಮೇಲೆ ನದಿ ಉಕ್ಕಿ ಹರಿಯುತ್ತಿದ್ದ ಪರಿಣಾಮ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು. ಪಟ್ಟಣಹೊಳೆ, ಕೆಂಗ್ರೆ ಹೊಳೆಯೂ ಭರ್ತಿಯಾಗಿದ್ದು ಸೇತುವೆಗಳು ಸಂಪೂರ್ಣ ಮುಚ್ಚಿದ್ದವು. ಸಂಚಾರ ಸ್ಥಗಿತಗೊಂಡಿತ್ತು.
ಕಕ್ಕಳ್ಳಿ-ವಾನಳ್ಳಿ ನಡುವಿನ ರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಹಲವೆಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದವು. ನೂರಾರು ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ವಿದ್ಯುತ್, ದೂರವಾಣಿ ಸಂಪರ್ಕ ಕಡಿತಗೊಂಡಿದೆ.
ಶಿವಳ್ಳಿ ಗ್ರಾಮ ಪಂಚಾಯ್ತಿಯ ಚಿಂಚಳಿಕೆ ಗ್ರಾಮದಲ್ಲಿ ಕೆರೆ ಒಡ್ಡು ಒಡೆದ ಪರಿಣಾಮ 60 ಎಕರೆಗೂ ಹೆಚ್ಚು ಭತ್ತದ ಗದ್ದೆ ಮುಳುಗಡೆಯಾಗಿದೆ. ನಾಟಿಗೆ ಸಿದ್ಧಪಡಿಸಿಟ್ಟುಕೊಂಡಿದ್ದ ಭತ್ತದ ಸಸಿಗಳು ತೇಲಿಹೋಗಿವೆ. ಪಕ್ಕದಲ್ಲಿದ್ದ ಅಡಿಕೆ ತೋಟಕ್ಕೂ ನೀರು ನುಗ್ಗಿದೆ. ಶಿರಸಿ ನಗರದ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದ್ದವು.
ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ನೆರೆ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.