ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಹೊಳೆಯಂತಾದ ರಸ್ತೆ

ಹಲವು ದಿನಗಳ ಬಿಡುವಿನ ನಂತರ ಅಬ್ಬರಿಸಿದ ವರ್ಷಧಾರೆ
Last Updated 14 ಅಕ್ಟೋಬರ್ 2020, 17:51 IST
ಅಕ್ಷರ ಗಾತ್ರ

ಕಾರವಾರ: ಹಲವು ದಿನಗಳ ಬಿಡುವಿನ ನಂತರ ಬುಧವಾರ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಯಿತು. ಕಾರವಾರ, ಕುಮಟಾದಲ್ಲಿ ರಸ್ತೆಗಳು, ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾದವು.

ಮಂಗಳವಾರ ತಡರಾತ್ರಿಯಿಂದ ಭಟ್ಕಳದಲ್ಲಿ ಶುರುವಾದ ಮಳೆಯು ಬುಧವಾರ ಮಧ್ಯಾಹ್ನದ ನಂತರ ಇಡೀ ಜಿಲ್ಲೆಗೆ ಆವರಿಸಿತು. ಕಾರವಾರದಲ್ಲಿ ಮಧ್ಯಾಹ್ನ 2.45ರ ಸುಮಾರಿಗೆ ಗಾಳಿ, ಗುಡುಗು ಜೊತೆಗೆ ಮಳೆಯ ಅಬ್ಬರಿಸಿತು. ಒಂದೂವರೆ ತಾಸಿಗೂ ಅಧಿಕ ಕಾಲ ಒಂದೇ ಸಮನೆ ಎಡೆಬಿಡದೇ ಧಾರಾಕಾರ ಮಳೆಯಾಯಿತು. ಜಿಟಿಜಿಟಿ ಮಳೆಯು ಸಂಜೆ 5.30ರವರೆಗೂ ಮುಂದುವರಿದಿತ್ತು.

ನಗರದ ಹಬ್ಬುವಾಡದಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಚರಂಡಿ ಉಕ್ಕಿ ಹರಿಯಿತು. ಇದರ ಪರಿಣಾಮ ರಸ್ತೆಯು ಹೊಳೆಯಂತಾಗಿತ್ತು. ಅಕ್ಕಪಕ್ಕದ ಮನೆಗಳು, ಅಂಗಡಿಗಳು ಜಲಾವೃತವಾಗಿ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸಿದರು. ದಟ್ಟವಾದ ಮೋಡ ಕವಿದ ಕಾರಣ ವಾಹನಗಳು ಮಧ್ಯಾಹ್ನವೂ ಹೆಡ್‌ಲೈಟ್ ಬೆಳಗಿಕೊಂಡು ಸಂಚರಿಸಬೇಕಾಯಿತು. ಒಂದು ಅಡಿಗೂ ಹೆಚ್ಚು ನೀರು ನಿಂತಿದ್ದ ಕಾರಣ ರಸ್ತೆಯಂಚು ತಿಳಿಯದೇ ವಾಹನ ಚಾಲಕರು ಆತಂಕದಲ್ಲೇ ಸಾಗಿದರು. ಕಾಳಿ ನದಿ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಹೋಟೆಲ್‌ಗೆ ನೀರು ನುಗ್ಗಿ ಅವಾಂತರವಾಯಿತು.

ಇಂದೂ ಮಳೆ ಸಾಧ್ಯತೆ:

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಜಿಲ್ಲೆಯಲ್ಲಿ ಗುರುವಾರವೂ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೇ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿಯೂ ಬೀಸಬಹುದು. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಹೋಗದಿರುವುದು ಉತ್ತಮ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT