ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ಸಚಿವ ಹೆಬ್ಬಾರ

ಹೆರಿಗೆ ದಿನಾಂಕದಿಂದ ಎರಡು ವಾರ ಮೊದಲು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ
Last Updated 6 ಮೇ 2021, 16:01 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಗರ್ಭಿಣಿಯರಿಗೆ ಹೆರಿಗೆಯ ದಿನಾಂಕದಿಂದ ಎರಡು ವಾರಗಳ ಮೊದಲು ಕೋವಿಡ್ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ವೈದ್ಯರು ಮಾಡಿಕೊಂಡ ಮನವಿಯ ಮೇರೆಗೆ ಈ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಕ್ರಿಮ್ಸ್) ಗುರುವಾರ ಭೇಟಿ ನೀಡಿದ ಅವರು, ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕ್ರಮಗಳ ಕುರಿತು ಪರಿಶೀಲಿಸಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಲ್ಲಾಪುರದಲ್ಲಿ ಸ್ಥಾಪಿಸಲಾಗಿರುವ 15 ಸಾವಿರ ಲೀಟರ್ ಆಮ್ಲಜನಕ ಉತ್ಪಾದನಾ ಘಟಕವು ಮೇ 7ರಿಂದ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಇದಕ್ಕಿಂತ ಹೆಚ್ಚು ಸಾಮರ್ಥ್ಯದ ಘಟಕಗಳನ್ನು ಕಾರವಾರ, ಶಿರಸಿ ಮತ್ತು ಭಟ್ಕಳದಲ್ಲಿ ಸ್ಥಾಪಿಸಲು ಮಂಜೂರಾತಿ ನೀಡಲಾಗಿದೆ. ಇದು ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಕೋವಿಡ್ ಚಿಕಿತ್ಸಾ ಕಾರ್ಯಕ್ಕೆ ಅಗತ್ಯವಿದ್ದರೆ ದಾಂಡೇಲಿಯ ಇ.ಎಸ್.ಐ ಆಸ್ಪತ್ರೆಯನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುವುದು. ಹುಬ್ಬಳ್ಳಿಯ ಇ.ಎಸ್.ಐ ಆಸ್ಪತ್ರೆಯಿಂದ ಎಂಟು ವೈದ್ಯರನ್ನು ಮುಂಡಗೋಡ, ಯಲ್ಲಾಪುರ, ಹಳಿಯಾಳ ಮತ್ತು ದಾಂಡೇಲಿಗೆ ನಿಯೋಜಿಸಲಾಗಿದೆ. ಈ ರೀತಿ ರಾಜ್ಯದಾದ್ಯಂತ ಕಾರ್ಮಿಕ ಇಲಾಖೆಯ 79 ವೈದ್ಯರನ್ನು ನಿಯೋಜಿಸಲಾಗಿದೆ’ ಎಂದೂ ತಿಳಿಸಿದರು.

‘ಕ್ರಿಮ್ಸ್‌ನಲ್ಲಿ 10 – 12 ದಿನಗಳಲ್ಲಿ ಹೆಚ್ಚುವರಿಯಾಗಿ 20 ಐ.ಸಿ.ಯು ಹಾಸಿಗೆಗಳನ್ನು ಅಳವಡಿಸಲು ಸಿದ್ಧತೆ ಮಾಡಲಾಗಿದೆ. ಜಿಲ್ಲೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳು 515 ಇದ್ದು, ಗುರುವಾರ 72 ಭರ್ತಿಯಾಗಿದ್ದವು. ಒಟ್ಟು 61 ವೆಂಟಿಲೇಟರ್‌ಗಳಲ್ಲಿ 31 ಕ್ರಿಮ್ಸ್‌ನಲ್ಲಿವೆ. ಅವುಗಳಲ್ಲಿ 47 ಖಾಲಿಯಿದ್ದು, 14 ಭರ್ತಿಯಾಗಿವೆ. ರೆಮಿಡಿಸಿವರ್ ಚುಚ್ಚುಮದ್ದು 800ರಷ್ಟು ಸಂಗ್ರಹವಿದೆ.’ ಎಂದು ಅಂಕಿ ಅಂಶ ನೀಡಿದರು.

‘ಜಿಲ್ಲೆಯಲ್ಲಿ ಸದ್ಯಕ್ಕೆ ಆಮ್ಲಜನಕದ ಸಿಲಿಂಡರ್‌ಗಳ ಸಮಸ್ಯೆಯಿಲ್ಲ. ಒಟ್ಟು 11 ಟನ್ ಸಂಗ್ರಹದ ಸಾಮರ್ಥ್ಯವಿದೆ. ಖಾಲಿಯಾಗುತ್ತಿದ್ದಂತೆ ಎರಡು ದಿನಗಳ ಮೊದಲೇ ಭರ್ತಿ ಮಾಡಲಾಗುತ್ತಿದೆ. ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳ ಖರೀದಿ, ವ್ಯವಸ್ಥೆಗಳಿಗೆ ಕ್ರಿಮ್ಸ್‌ ನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿಗೆ ಜವಾಬ್ದಾರಿ ನೀಡಲಾಗಿದೆ. ಅವರು ಜಿಲ್ಲಾಧಿಕಾರಿಗೆ ಬೇಡಿಕೆಗಳನ್ನು ಸಲ್ಲಿಸಬೇಕು’ ಎಂದು ತಿಳಿಸಿದರು.

‘ತುರ್ತು ನಿಗಾ ವಾರ್ಡ್‌ಗಳಿಗೆ ನರ್ಸ್‌ಗಳ ಮತ್ತು ಡಿ ದರ್ಜೆ ನೌಕರರ ನೇಮಕಕ್ಕೆ ಅನುಮತಿ ನೀಡಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನೂ ಸದ್ಬಳಕೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ವ್ಯವಹಾರ ಸಮಯ ಬದಲು

‘ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಕರ್ಫ್ಯೂ ವಿನಾಯಿತಿಯ ವೇಳೆಯನ್ನು ಎರಡು ತಾಸು ಕಡಿಮೆ ಮಾಡಲಾಗಿದೆ. ಸರ್ಕಾರವು ವಿನಾಯಿತಿ ನೀಡಿದ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 6ರಿಂದ ಬೆಳಿಗ್ಗೆ 10ರವರೆಗೆ ಮಾತ್ರ ತೆರೆಯಬಹುದು’ ಎಂದು ಶಿವರಾಮ ಹೆಬ್ಬಾರ ತಿಳಿಸಿದರು.

‘ಒಂದು ವಾರದಲ್ಲಿ ಆಗುವ ಬದಲಾವಣೆಗಳನ್ನು ಅವಲೋಕಿಸಲಾಗುವುದು. ಒಂದುವೇಳೆ, ಇದಕ್ಕೂ ಜನರು ಸಹಕರಿಸದಿದ್ದರೆ ಕಠಿಣ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಗಂಟಲುದ್ರವವನ್ನು ಪರೀಕ್ಷೆಗೆ ಕೊಟ್ಟವರು, ಐಸೋಲೇಷನ್‌ನಲ್ಲಿ ಇರುವವರು ತಮ್ಮ ಕುಟುಂಬದ ಸದಸ್ಯರು ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಿ. ಅನಗತ್ಯವಾಗಿ ಹೊರಗೆ ಸುತ್ತಾಡಬೇಡಿ’ ಎಂದು ಸೂಚಿಸಿದರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT