ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ವೆರ್ನಾದಿಂದ ಬಂತು ವಿದ್ಯುತ್ ಲೋಕೋ

ವಿದ್ಯುದೀಕರಣದಲ್ಲಿ ಮತ್ತೊಂದು ಹೆಜ್ಜೆ ಇಟ್ಟ ಕೊಂಕಣ ರೈಲ್ವೆ: ಪ್ರಾಯೋಗಿಕ ಸಂಚಾರ ಯಶಸ್ವಿ
Last Updated 6 ಜನವರಿ 2022, 19:31 IST
ಅಕ್ಷರ ಗಾತ್ರ

ಕಾರವಾರ: ತನ್ನ ಮಾರ್ಗದಲ್ಲಿ ಸಂಪೂರ್ಣವಾಗಿ ಇಂಗಾಲ ರಹಿತ ಪ್ರಯಾಣದ ಗುರಿಯನ್ನು ಹೊಂದಿರುವ ಕೊಂಕಣ ರೈಲ್ವೆಯು ಇದರತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಗೋವಾದ ವೆರ್ನಾದಿಂದ ಕಾರವಾರದವರೆಗೆ ವಿದ್ಯುದೀಕರಣ ಪೂರ್ಣಗೊಂಡಿದ್ದು, ಗುರುವಾರ ನಡೆಸಿದ ವಿದ್ಯುತ್ ಲೋಕೋದ ಪ್ರಾಯೋಗಿಕ ಸಂಚಾರವು ಯಶಸ್ವಿಯಾಗಿದೆ.

ವೆರ್ನಾದಿಂದಕಾರವಾರವರೆಗಿನ ಒಟ್ಟು 116 ಕಿಲೊ ಮೀಟರ್ ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲು ಎಂಜಿನ್ ಸುಗಮವಾಗಿ ಸಂಚರಿಸಿತು. ಮಂಗಳೂರು ಸಮೀಪ‍ದ ತೋಕೂರಿನಿಂದ ಕಾರವಾರ ತನಕದ ಮಾರ್ಗದಲ್ಲಿ ವಿದ್ಯುದೀಕರಣ ಈಗಾಗಲೇ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಇದೀಗ ಕಾರವಾರದಿಂದ ಮುಂದಕ್ಕೆ ಕೂಡ ಪ್ರಾಯೋಗಿಕ ಸಂಚಾರ ನಡೆದಿದ್ದು, ವಿದ್ಯುತ್ ಚಾಲಿತ ಎಂಜಿನ್‌ಗಳಿರುವ ರೈಲುಗಳು ಇನ್ನೊಂದೆರಡು ತಿಂಗಳಲ್ಲಿ ಸಂಚರಿಸುವ ನಿರೀಕ್ಷೆಯಿದೆ.

ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಕಾರವಾರದವರೆಗೆ ಪೂರ್ಣಗೊಂಡಿದ್ದರೂ ಇಲ್ಲಿ ಎಂಜಿನ್ ಬದಲಿಸಲು ಸೌಲಭ್ಯವಿಲ್ಲ. ಇದಕ್ಕಾಗಿ ಗೋವಾದ ಮಡಗಾಂವ್‌ಗೇ ತೆರಳಬೇಕಿತ್ತು. ಆದರೆ, ಆ ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡಿರಲಿಲ್ಲ. ಹಾಗಾಗಿ ವಿದ್ಯುದೀಕರಣ ಪೂರ್ಣಗೊಂಡ ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲುಗಳ ಸಂಚಾರ ಸಾಧ್ಯವಾಗಿರಲಿಲ್ಲ. ಕಾರವಾರದಿಂದ ವೆರ್ನಾದವರೆಗೆ ಕಾಮಗಾರಿ ಪೂರ್ಣಗೊಂಡಿರುವುದು ಈ ನಿಟ್ಟಿನಲ್ಲಿ ಅನುಕೂಲವಾಗಿದೆ.

ಕೊಂಕಣ ರೈಲ್ವೆಗೆ ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀಪದ ತೋಕೂರಿನವರೆಗೆ ಒಟ್ಟು 756 ಕಿಲೋಮೀಟರ್ ಮಾರ್ಗವಿದೆ. ರೋಹಾದಿಂದ ರತ್ನಗಿರಿವರೆಗಿನ ಮಾರ್ಗದಲ್ಲಿ ಕೂಡ ಕಳೆದ ವರ್ಷ ಮಾರ್ಚ್‌ನಲ್ಲಿ ವಿದ್ಯುತ್ ಚಾಲಿಕ ಎಂಜಿನ್‌ನ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿತ್ತು. ಮಡಗಾಂವ್‌ನಿಂದ ಮಹಾರಾಷ್ಟ್ರದ ಕರ್ಮಾಲಿವರೆಗಿನ ವಿದ್ಯುದೀಕರಣ ಕಾಮಗಾರಿಯೂ ಪೂರ್ಣಗೊಂಡಿದೆ.

ಮೊದಲು ಗೂಡ್ಸ್ ರೈಲು ಸಂಚಾರ:‘ಕಾರವಾರದಿಂದ ವೆರ್ನಾವರೆಗಿನ ಹಳಿಯಲ್ಲಿ ವಿದ್ಯುತ್ ಮಾರ್ಗಕ್ಕೆ ಬುಧವಾರ ರಾತ್ರಿ ಚಾಲನೆ ನೀಡಲಾಗಿತ್ತು. ಅದರ ನಿರ್ವಹಣೆಯನ್ನು ಪರಿಶೀಲಿಸಿ ಗುರುವಾರ ಎಂಜಿನ್ ಸಂಚಾರದ ಪ್ರಯೋಗ ಮಾಡಲಾಗಿದೆ’ ಎಂದು ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಎಂಜಿನ್‌ನಲ್ಲಿರುವ ಹಾಗೂ ನಿಯಂತ್ರಣ ಕೊಠಡಿಯಲ್ಲಿರುವ ವಿವಿಧ ಮಾಪಕಗಳನ್ನು ಪರೀಕ್ಷಾರ್ಥ ಸಂಚಾರದ ವೇಳೆ ಅಧ್ಯಯನ ಮಾಡಲಾಗುತ್ತದೆ. ಅದರ ವರದಿಯನ್ನು ಕೊಂಕಣ ರೈಲ್ವೆಯ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪರಿಶೀಲಿಸಿ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗುತ್ತದೆ. ಎಲ್ಲವೂ ಅಂತಿಮವಾಗಿ ಅನುಮತಿ ಸಿಕ್ಕಿ ಬಳಿಕ ರೈಲುಗಳ ಸಂಚಾರ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ವಿದ್ಯುತ್ ಚಾಲಿತ ಮಾರ್ಗದಲ್ಲಿ ಮಂಗಳೂರಿನಿಂದ ಕಾರವಾರದ ತನಕ ಸರಕು ಸಾಗಣೆಯ ರೈಲುಗಳು ಮೊದಲು ಸಂಚರಿಸಲಿವೆ. ವಿದ್ಯುತ್ ಮಾರ್ಗಗಳ ಕಾರ್ಯಾಚರಣೆಯು ಸ್ಥಿರವಾದ ಬಳಿಕ ಪ್ರಯಾಣಿಕರ ರೈಲುಗಳ ಸಂಚಾರ ಆರಂಭವಾಗಲಿದೆ. ಇದಕ್ಕೆ ಎರಡು, ಮೂರು ತಿಂಗಳು ಬೇಕಾಗಬಹುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT