ಕಾರವಾರ: ಒಂದು ವಾರದಿಂದ ಅಬ್ಬರಿಸುತ್ತಿರುವ ಮಳೆಯ ಪರಿಣಾಮ, ಅರಬ್ಬಿ ಸಮುದ್ರ ಭೋರ್ಗರೆಯುತ್ತಿದೆ. ಇದರಿಂದಾಗಿ ತಾಲ್ಲೂಕಿನ ವಿವಿಧೆಡೆ ಅಲೆಗಳು ಕಡಲಕಿನಾರೆಯನ್ನು ಆಪೋಶನ ಪಡೆಯುತ್ತಿವೆ.
ಮಾಜಾಳಿ, ದಂಡೇಬಾಗ, ಗಾಂವಗೇರಿ ಕ್ರಾಸ್ ಮುಂತಾದೆಡೆ ಮರಳಿನ ದಂಡೆಗಳು ಸಮುದ್ರ ಪಾಲಾಗಿವೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದ್ದ ಡಾಂಬರು, ಕಾಂಕ್ರೀಟ್ ರಸ್ತೆಗಳಿಗೂ ಅಪಾಯ ಎದುರಾಗಿದೆ. ಕೆಲವೆಡೆ ಈಗಾಗಲೇ ರಸ್ತೆಯಂಚಿನ ತನಕ ಭಾರಿ ಅಲೆಗಳು ಅಪ್ಪಳಿಸುತ್ತಿವೆ. ಮಳೆ ಮತ್ತು ಸಮುದ್ರದ ಅಲೆಗಳಿಂದ ಹಾನಿಗೀಡಾದ ಗಾಂವಗೇರಿ ಸಮೀಪದ ಕಾಂಕ್ರೀಟ್ ರಸ್ತೆಯನ್ನು ದುರಸ್ತಿ ಮಾಡಲಾಗುತ್ತಿದೆ. ಹಾಗಾಗಿ ಅಲ್ಲಿ ನಾಲ್ಕು ಚಕ್ರಗಳ ವಾಹನಗಳ ಸಂಚಾರ ಸದ್ಯಕ್ಕೆ ಸಾಧ್ಯವಿಲ್ಲ.
ಮುಂಗಾರು ಅವಧಿಯಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತವೆ. ಸಮುದ್ರದಲ್ಲಿ ಉಬ್ಬರ ಇರುವಾಗ ಅಲೆಗಳು ಮತ್ತಷ್ಟು ವೇಗ ಪಡೆಯುತ್ತವೆ. ಆಗ ರಭಸದ ಗಾಳಿಯೂ ಜೊತೆಗಿದ್ದರೆ ಅಲೆಗಳ ತೀವ್ರತೆ ಇನ್ನೂ ಹೆಚ್ಚಿರುತ್ತದೆ. ದಂಡೇಬಾಗ್‌ನಲ್ಲಿ ಗಾಳಿ ಮರಗಳು, ತೆಂಗಿನ ಮರಗಳಿಗೆ ಹಾನಿಯಾಗಿದ್ದು, ಕೆಲವು ಧರೆಗುರುಳಿವೆ. ಗ್ರಾಮದಿಂದ ಮಳೆ ನೀರನ್ನು ಸಮುದ್ರಕ್ಕೆ ತರುವ ಕಾಲುವೆಗೂ ಸ್ವಲ್ಪ ಪ್ರಮಾಣದಲ್ಲಿ ತೊಂದರೆಯಾಗಿದ್ದು, ಮರಳಿನ ರಾಶಿ ಕುಸಿಯುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.