ಭಾನುವಾರ, ಮೇ 16, 2021
28 °C
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಿರಂತರ ಅಪಘಾತ: ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಹೆದ್ದಾರಿ ಬದಿ ಮರಗಳ ಟೊಂಗೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇತ್ತೀಚಿಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಕಂಡುಕೊಳ್ಳಲು ತನಿಖೆ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳ ಸಮಿತಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ್, ಡಿ.ವೈ.ಎಸ್ಪಿ ಅರವಿಂದ ಕಲಗುಜ್ಜಿ, ಸಿ.ಪಿ.ಐ ಕೃಷ್ಣಾನಂದ ನಾಯಕ, ಪಿ.ಎಸ್.ಐ ಈ.ಸಿ.ಸಂಪತ್ ನೇತೃತ್ವದ ಅಧಿಕಾರಿಗಳ ತಂಡವು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿತು. ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳೂ ಇದ್ದರು.

ಸುಂಕಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬುಳದ ತಿರುವು ಅತ್ಯಂತ ಅಪಾಯಕಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 63ರ ಅಂಕೋಲಾ– ಯಲ್ಲಾಪುರ ಮಾರ್ಗದಲ್ಲಿ ಸಂಭವಿಸಿದ ಶೇ 60ಕ್ಕೂ ಹೆಚ್ಚು ಅಪಘಾತಗಳು ಇಲ್ಲೇ ಆಗಿವೆ. ಇಲ್ಲಿನ ಅಪಘಾತ ತೀವ್ರತೆಗೆ ಪ್ರಾಣ ತೆತ್ತವರೇ ಹೆಚ್ಚು.

ಈ ಸ್ಥಳದಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ ಮರದ ಟೊಂಗೆಗಳು ವಿಶಾಲವಾಗಿ ಚಾಚಿಕೊಂಡಿವೆ. ಹಾಗಾಗಿ ಯಲ್ಲಾಪುರದಿಂದ– ಅಂಕೋಲಾದತ್ತ ಸಾಗುವ ವಾಹನ ಸವಾರರಿಗೆ ಮುಂಭಾಗದಿಂದ ಬರುವ ವಾಹನಗಳು ಸರಿಯಾಗಿ ಗೋಚರಿಸುತ್ತಿಲ್ಲ. ಶುಕ್ರವಾರ ಹಿರಿಯ ಅಧಿಕಾರಿಗಳ ತಂಡದ ಸಲಹೆ ಮೇರೆಗೆ ಇಲ್ಲಿನ ಬೃಹತ್ ಮರಗಳ ಟೊಂಗೆಗಳನ್ನು ಕತ್ತರಿಸಲು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಶನಿವಾರ ಕಾರ್ಯಾಚರಣೆ ಮಾಡಲಾಯಿತು.

ಆರು ತಾಸು ಶ್ರಮ

ಮರಗಳ ರೆಂಬೆಗಳನ್ನು ಶನಿವಾರ ತೆರವು ಮಾಡಲು ಸುಮಾರು 50 ಜನರ ತಂಡ, ಸತತ ಆರು ತಾಸು ಶ್ರಮಿಸಿತು. ರಸ್ತೆಯ ಪಕ್ಕದ ಖಾಸಗಿ ಮಾಲೀಕತ್ವದ ಜಮೀನಿನಲ್ಲಿರುವ ಮರದ ಟೊಂಗೆಗಳನ್ನು ಕತ್ತರಿಸಲಾಯಿತು. ರಸ್ತೆಯ ಪಕ್ಕದಲ್ಲಿ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ಕಾರ್ಯಾಚರಣೆ ನಡೆಸಿದ್ದರಿಂದ ಸ್ವಲ್ಪಹೊತ್ತು ಸಂಚಾರ ವ್ಯತ್ಯಯವಾಗಿತ್ತು. ಈ ಕಾರ್ಯದಿಂದ ವಾಹನ ಸವಾರರಿಗೆ ತುಸು ನೆಮ್ಮದಿ ದೊರೆತಂತಾಗಿದೆ.

ಪಿ.ಎಸ್.ಐ ಈ.ಸಿ.ಸಂಪತ್, ಪಿ.ಎಸ್.ಐ ಪ್ರೇಮನ ಗೌಡ ಪಾಟೀಲ್, ಹೆಸ್ಕಾಂ ಗ್ರಾಮೀಣ ವಿಭಾಗಿಯ ಅಧಿಕಾರಿ ಗೀತಾ ಜಯರಾಮ, ಮಾಸ್ತಿಕಟ್ಟೆ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಮಲ್ಲಪ್ಪಗೊಳ್, ಉಪ ವಲಯ ಅರಣ್ಯಾಧಿಕಾರಿಗಳಾದ ನವೀನ್ ಪಾಟೀಲ್ ಮತ್ತು ರಾಘವೇಂದ್ರ ಜೀರಗಾಳ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.