ಸೋಮವಾರ, ಜನವರಿ 27, 2020
27 °C
ಪಾಕ್‌ಗೆ ಮಾಹಿತಿ ನೀಡಿದ ಆರೋಪ

ನೌಕಾಪಡೆಯ ಏಳು ಸಿಬ್ಬಂದಿ, ಒಬ್ಬ ಹವಾಲಾ ನಿರ್ವಾಹಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನೌಕಾಪಡೆಯ ‘ಅತ್ಯಂತ ಸೂಕ್ಷ್ಮ’ ಮಾಹಿತಿಗಳನ್ನು ಪಾಕಿಸ್ತಾನದ ಮಧ್ಯವರ್ತಿಗಳಿಗೆ ನೀಡಿದ ಆರೋಪದ ಮೇಲೆ, ನೌಕಾಪಡೆಯ ಏಳು ಸಿಬ್ಬಂದಿ ಹಾಗೂ ಒಬ್ಬ ಹವಾಲಾ ಆಪರೇಟರ್‌ನನ್ನು ಬಂಧಿಸಲಾಗಿದೆ. ಅವರಲ್ಲಿ ಇಲ್ಲಿನ ಸೀಬರ್ಡ್ ನೌಕಾನೆಲೆಯ ಇಬ್ಬರು ಸಿಬ್ಬಂದಿಯೂ ಸೇರಿದ್ದಾರೆ.

ಆಂಧ್ರಪ್ರದೇಶ ಪೊಲೀಸ್‌ನ ಗುಪ್ತಚರ ವಿಭಾಗವು, ನೌಕಾಪಡೆ ಹಾಗೂ ಕೇಂದ್ರ ಗುಪ್ತಚರ ಇಲಾಖೆಗಳ ಸಹಯೋಗದಲ್ಲಿ ‘ಡಾಲ್ಫಿನ್ಸ್‌ ನೋಸ್’ ಎಂಬ ಹೆಸರಿನ ಕಾರ್ಯಾಚರಣೆ ಕೈಗೊಂಡಿತ್ತು. ಇದರಲ್ಲಿ ವಿಶಾಖಪಟ್ಟಣದಲ್ಲಿ ಮೂವರು, ಕಾರವಾರ ಹಾಗೂ ಮುಂಬೈನಲ್ಲಿ ತಲಾ ಇಬ್ಬರು ಸೆರೆ ಸಿಕ್ಕಿದ್ದಾರೆ.

ಹನಿಟ್ರ್ಯಾಪ್: ಬಂಧಿತರೆಲ್ಲರೂ ಯುವಕರಾಗಿದ್ದು, ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದರು. ಅವರನ್ನು ಸಂ‍ಪರ್ಕಿಸಿದ ಪಾಕಿಸ್ತಾನದ ಮೂವರು ಅಥವಾ ನಾಲ್ವರು ಯುವತಿಯರು, ಆನ್‌ಲೈನ್ ಸಂಬಂಧ ಬೆಳೆಸಲು ಆಮಿಷವೊಡ್ಡಿದ್ದರು. ಅಲ್ಲದೇ ಲೈಂಗಿಕವಾದ ಸಂಭಾಷಣೆ, ವಿಡಿಯೊ ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಳಿಕ ವ್ಯಕ್ತಿಯೊಬ್ಬನನ್ನು ‘ಉದ್ಯಮಿ’ ಎಂದು ಪರಿಚಯಿಸಿದ್ದರು.

ಆತ ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ಗೆ (ಐಎಸ್‌ಐ) ಕೆಲಸ ಮಾಡುತ್ತಿದ್ದ. ಆತ ನೌಕಾಪಡೆಯ ಸಿಬ್ಬಂದಿಯನ್ನು ಬೆದರಿಸುತ್ತಿದ್ದ. ಅಲ್ಲದೇ ಹಣ ಪಾವತಿಸುವ ಆಮಿಷವನ್ನೂ ಒಡ್ಡಿದ್ದ. ದುಷ್ಟರ ಜಾಲಕ್ಕೆ ಸಿಲುಕಿದ ಸಿಬ್ಬಂದಿ, ಭಾರತೀಯ ನೌಕಾಪಡೆಯ ನೌಕೆಗಳು, ಸಬ್‌ಮರೀನ್‌ಗಳ ಚಲನವಲನಗಳ ಮಾಹಿತಿಯನ್ನು ನೀಡುತ್ತಿದ್ದರು ಎನ್ನಲಾಗಿದೆ’ ಎಂದು ಇಂಗ್ಲಿಷ್ ಪತ್ರಿಕೆಗಳು ಹಾಗೂ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಈ ಬಗ್ಗೆ ಆಂಧ್ರಪ್ರದೇಶ ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಕೇಂದ್ರ ಗುಪ್ತಚರ ದಳ ಮತ್ತು ನೌಕಾಪಡೆಯ ಗುಪ್ತಚರ ದಳ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದವು. ಈ ನಡುವೆ, ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ನೌಕಾಪಡೆಯು ತನ್ನ ಸಿಬ್ಬಂದಿಗೆ ಮಾರ್ಗದರ್ಶಿ ಸೂಚನೆಗಳನ್ನು ಜಾರಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ನ್ಯಾಯಾಂಗ ಬಂಧನ: ಬಂಧಿತ ಎಂಟೂ ಆರೋಪಿಗಳನ್ನು ವಿಜಯವಾಡದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಅವರಿಗೆ ಜ.3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಸಂಬಂಧ ಮತ್ತೂ ಕೆಲವರನ್ನು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

*
ಇದು ಆಂಧ್ರಪ್ರದೇಶ ಪೊಲೀಸರು ನಡೆಸಿದ ದೊಡ್ಡಮಟ್ಟದ ಕಾರ್ಯಾಚರಣೆಯಾಗಿದೆ. ಪ್ರಕರಣದ ಸತ್ಯಾಸತ್ಯೆಯನ್ನು ಪರಿಶೀಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
-ಕ್ಯಾಪ್ಟನ್ ಅಜಯ್ ಕಪೂರ್, ನೌಕಾಪಡೆಯ ಸಾರ್ವಜನಿಕ ಸಂಪರ್ಕಾಧಿಕಾರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು