ಕಾರ್ಯಕರ್ತರ ನೋಂದಣಿ ಕಾರ್ಯಕ್ಕೆ ‘ಶಕ್ತಿ’

7
ಕಾಂಗ್ರೆಸ್‌ ಪಕ್ಷದ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಆರ್.ವಿ.ದೇಶಪಾಂಡೆ

ಕಾರ್ಯಕರ್ತರ ನೋಂದಣಿ ಕಾರ್ಯಕ್ಕೆ ‘ಶಕ್ತಿ’

Published:
Updated:
Deccan Herald

ಶಿರಸಿ: ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ನಿರಂತರ ಸಂಪರ್ಕ ಕೊಂಡಿ ಬೆಸೆಯುವ ಉದ್ದೇಶದೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅನುಷ್ಠಾನಕ್ಕೆ ತಂದಿರುವ ‘ಶಕ್ತಿ’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಶನಿವಾರ ಇಲ್ಲಿ ಚಾಲನೆ ನೀಡಿದರು.

ನೂತನ ಕಾರ್ಯಕ್ರಮದನ್ವಯ ಪಕ್ಷದ ಪ್ರಮುಖರಿಂದ ಕಾರ್ಯಕರ್ತರವರೆಗೆ ಎಲ್ಲರೂ 7045006011 ಈ ನಂಬರಿಗೆ ಚುನಾವಣಾ ಗುರುತಿನ ಚೀಟಿಯ ಸಂಖ್ಯೆ ಎಸ್‌ಎಂಎಸ್ ಮಾಡಿದರೆ, ಎಐಸಿಸಿ ಮಟ್ಟದಲ್ಲಿ ಹೆಸರು ನೋಂದಣಿಯಾಗುತ್ತದೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ’ಕಾರ್ಯಕರ್ತರ ಬಲದಿಂದ ಪಕ್ಷ ಬೆಳೆಯಲು ಸಾಧ್ಯ. ಪ್ರಾಮಾಣಿಕ ಕಾರ್ಯಕರ್ತರೇ ಮುಂದೆ ಮುಖಂಡರಾಗಿ ಬೆಳೆಯುತ್ತಾರೆ. ಪಕ್ಷದ ಕಾರ್ಯಕರ್ತರಿಗೆ ಹಿರಿಯ ಮುಖಂಡರ ಸಂಪರ್ಕ ಸಾಧಿಸುವುದು ಕಷ್ಟವಾಗುತ್ತಿತ್ತು. ಈ ಕಾರಣ ಪಕ್ಷದ ಪ್ರತಿಯೊಬ್ಬ ಮುಖಂಡನ ಜತೆ ಕಾರ್ಯಕರ್ತರು ಸಂಪರ್ಕ ಸಾಧಿಸಲು ಅನುಕೂಲವಾಗಲೆಂದು ರಾಹುಲ್ ಗಾಂಧಿ ಹೊಸ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಇದರಿಂದ ಪಕ್ಷ ಸಂಘಟನೆಯೂ ಬಲಗೊಳ್ಳುತ್ತದೆ. ಜಿಲ್ಲೆಯಲ್ಲಿ ಯುದ್ಧೋಪಾದಿಯಲ್ಲಿ ನೋಂದಣಿ ನಡೆಯಬೇಕು’ ಎಂದು ಕರೆ ನೀಡಿದರು.

ಚುನಾವಣೆ ಸಿದ್ಧತೆ:  ‘ಜಿಲ್ಲೆ ಎಂಟು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಳು ನಡೆದಿವೆ. ಬ್ಲಾಕ್ ಅಧ್ಯಕ್ಷರು ಆಯಾ ವಾರ್ಡ್‌ನ ಮುಖಂಡರೊಂದಿಗೆ ಚರ್ಚಿಸಿ, ಆಯ್ಕೆಯಾಗುವ ಯೋಗ್ಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು, ಯುವಜನರಿಗೆ ವಿಶೇಷ ಆದ್ಯತೆ ನೀಡಬೇಕು’ ಎಂದು ದೇಶಪಾಂಡೆ ಸೂಚಿಸಿದರು.

ಮೀಸಲಾತಿ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಸಚಿವರು ಅಥವಾ ಪ್ರಮುಖರ ಕೈಯಲ್ಲಿರುವುದಿಲ್ಲ. ಜನಸಂಖ್ಯೆ ಆಧರಿಸಿ ಮೀಸಲಾತಿ ನಿರ್ಧಾರವಾಗುತ್ತದೆ. ಮೀಸಲಾತಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದೇ, ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸೋಲಾದರೂ, ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆಕಾಂಕ್ಷಿಗಳ ಅರ್ಜಿ ಸ್ವೀಕರಿಸಿ, ಕೆಪಿಸಿಸಿಗೆ ಕಳುಹಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಎಸ್.ಆರಾಧ್ಯ, ಬ್ಲಾಕ್ ಅಧ್ಯಕ್ಷ ಉಪೇಂದ್ರ ಪೈ, ಪಕ್ಷದ ಪ್ರಮುಖರಾದ ಶಾಂತಾರಾಮ ಹೆಗಡೆ, ಎನ್.ಪಿ.ಗಾಂವಕರ, ಎಸ್.ಕೆ.ಭಾಗವತ, ಸಿ.ಎಫ್.ನಾಯ್ಕ, ಮಾಧವ ರೇವಣಕರ, ಎಚ್.ಎಂ.ನಾಯ್ಕ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !