ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತರಾಮ ಸಿದ್ದಿ ಮನವಿಗೆ ಸಮುದಾಯದಲ್ಲೇ ವಿರೋಧ

Last Updated 18 ನವೆಂಬರ್ 2020, 11:28 IST
ಅಕ್ಷರ ಗಾತ್ರ

ಕಾರವಾರ: ‘ಮತಾಂತರ ಆಗಿರುವವರ ಹೆಸರನ್ನು ಪರಿಶಿಷ್ಟ ಪಂಗಡದ ಪಟ್ಟಿಯಿಂದ ತೆಗೆಯಬೇಕು. ಪರಿಶಿಷ್ಟ ಪಂಗಡಗಳಿಗೆ ಸಿಗುವ ಸೌಲಭ್ಯಗಳನ್ನು ಅವರಿಗೆ ಸ್ಥಗಿತಗೊಳಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರ ಮನವಿಗೆ ಸಿದ್ದಿ ಸಮುದಾಯದಲ್ಲೇ ಭಾರಿ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ‘ಅಖಿಲ ಕರ್ನಾಟಕ ಸಿದ್ದಿ ಸಮುದಾಯದ ಹಿತ ಹೋರಾಟ ಸಮಿತಿ’ಯ ಪ್ರಮುಖರು ಹಾಗೂ ಸಮುದಾಯದ ಹತ್ತಾರು ಮಂದಿ ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಸೌಲಭ್ಯಗಳನ್ನು ನಿಲ್ಲಿಸದಂತೆ ಒತ್ತಾಯಿಸಿದರು.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡ ದಿಯೋಗ ದಿ ಸಿದ್ದಿ, ‘ನಾವು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮವನ್ನು ಪಾಲಿಸಿಕೊಂಡು ಜೊತೆಯಾಗಿ ಜೀವಿಸುತ್ತಿದ್ದೇವೆ. ಸರ್ಕಾರವು ಇಡೀ ಸಿದ್ದಿ ಸಮುದಾಯವನ್ನು ಒಂದಾಗಿ ಪರಿಗಣಿಸಿ ಪರಿಶಿಷ್ಟ ಪಂಗಡದ ಸೌಲಭ್ಯ ನೀಡಿದೆ ವಿನಾ ನಾವು ಪಾಲಿಸುವ ಧರ್ಮಕ್ಕೆ ಅನುಗುಣವಾಗಿ ಅಲ್ಲ’ ಎಂದು ಹೇಳಿದರು.

‘ಒಂದು ವೇಳೆ, ನಮ್ಮಲ್ಲಿ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಪಂಗಡ, ಈ ಎರಡೂ ವಿಭಾಗಗಳಿಂದ ಸೌಲಭ್ಯಗಳನ್ನು ಪಡೆಯುತ್ತಿರುವವರು ಕಂಡುಬಂದರೆ ಶಾಂತರಾಮ ಸಿದ್ದಿ ಅವರು ತಿಳಿಸಲಿ. ಅಂಥವರ ಹೆಸರನ್ನು ಪಟ್ಟಿ ಮಾಡಿ, ಜಿಲ್ಲಾಧಿಕಾರಿ ಹಾಗೂ ಸಮುದಾಯದ ಪ್ರಮುಖರ ಎದುರು ಬಹಿರಂಗಪಡಿಸಲಿ. ಇದಕ್ಕೆ ಅವರು ವಿಫಲರಾದರೆ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿ’ ಎಂದು ಸವಾಲು ಹಾಕಿದರು.

‘ಅತ್ಯಂತ ಹಿಂದುಳಿದಿರುವ ಸಿದ್ದಿ ಸಮುದಾಯದ ಪ್ರಮುಖರೊಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿದಾಗ ನಾವೆಲ್ಲರೂ ಸಂಭ್ರಮಿಸಿದ್ದೆವು. ಆದರೆ, ಅವರು ಸಮುದಾಯದ ಬಗ್ಗೆ ನಮ್ಮ ಬಳಿ ಚರ್ಚಿಸದೇ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ. ಇಂಥ ಮಾತುಗಳನ್ನು ಅವರಾಗಿಯೇ ಹೇಳಿದ್ದೇ ಅಥವಾ ಬೇರೆಯವರು ಹೇಳಿಸಿದ್ದೇ ಎಂದು ನಮಗೆ ಗೊತ್ತಿಲ್ಲ. ಆದರೆ, ಇದು ಆಘಾತ ತಂದಿದ್ದು, ಜಿಲ್ಲಾಧಿಕಾರಿಯು ನಮಗೆ ಕಾನೂನು ಅರಿವು ಮೂಡಿಸಿ ಆತಂಕ ನಿವಾರಿಸಬೇಕು’ ಎಂದು ಒತ್ತಾಯಿಸಿದರು.

ನ.4ರಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದ ಶಾಂತರಾಮ ಸಿದ್ದಿ, ‘ಪಾರಂಪರಿಕ ಪರಿಶಿಷ್ಟ ಪಂಗಡಗಳು ಪಡೆಯುತ್ತಿರುವುದಕ್ಕಿಂತ ಹೆಚ್ಚು ಸೌಲಭ್ಯಗಳನ್ನು ಮತಾಂತರಗೊಂಡ ಪಂಗಡಗಳು ಪಡೆಯುತ್ತಿವೆ. ಪರಿಶಿಷ್ಟ ಜಾತಿಗಳ ವಿಷಯದಲ್ಲಿ ಇರುವ ರೀತಿಯ ಸ್ಪಷ್ಟತೆಯೇ ಪರಿಶಿಷ್ಟ ಪಂಗಡಗಳ ಸೌಲಭ್ಯಗಳ ವಿಚಾರದಲ್ಲೂ ಇರಬೇಕು. ಈ ಅನ್ಯಾಯವನ್ನು ಸರಿಪಡಿಸಿ’ ಎಂದು ಒತ್ತಾಯಿಸಿದ್ದರು. ಅವರ ಈ ಮನವಿಯನ್ನು ಖಂಡಿಸಿ ಹಳಿಯಾಳದಲ್ಲೂ ಈಚೆಗೆ ಪ್ರತಿಭಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT