ಗುರುವಾರ , ಜೂನ್ 30, 2022
22 °C
ಎರಡು ದಿನಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಭಕ್ತರ ಭೇಟಿ

ವಾರಾಂತ್ಯ: ಜಾತ್ರೆಯಲ್ಲಿ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮಾರಿಕಾಂಬಾ ದೇವಿ ಜಾತ್ರೆಯ ಆರನೇ ದಿನವಾದ ಭಾನುವಾರ ಜಾತ್ರೆಪೇಟೆಗೆ ಜನಸಾಗರ ಹರಿದು ಬಂದಿತು. ಪರಿಣಾಮವಾಗಿ ಜಾತ್ರಾ ಗದ್ದುಗೆಯಲ್ಲಿ ನೂಕುನುಗ್ಗಲು ಉಂಟಾಯಿತು.

ನಸುಕಿನ ಜಾವ 5 ಗಂಟೆಗೆ ದೇವಿ ದರ್ಶನ ಆರಂಭವಾಗಿತ್ತು. 4.30ರಿಂದಲೇ ಸರತಿ ಶುರುವಾಗಿತ್ತು. ದೂರದ ಊರುಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಿಶೇಷ ಆಮಂತ್ರಿತರ ಸಾಲು ಕೂಡ ಎರಡು ಕಿ.ಮೀನಷ್ಟು ಉದ್ದದವರೆಗೆ ಇತ್ತು. ವಿಶೇಷ ಗಣ್ಯರ ಕೌಂಟರ್‌ನಲ್ಲೂ ನೂಕುನುಗ್ಗಲು ಉಂಟಾದ ಪರಿಣಾಮ ಕೆಲಹೊತ್ತು ಅಲ್ಲಿಂದ ದರ್ಶನಕ್ಕೆ ಅವಕಾಶ ನೀಡುವುದನ್ನು ತಡೆಯಲಾಗಿತ್ತು.

ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸುಮಾರು 6 ಲಕ್ಷಕ್ಕೂ ಹೆಚ್ಚು ಭಕ್ತರು ಜಾತ್ರೆಗೆ ಭೇಟಿ ನೀಡಿದ್ದರು ಎಂದು ಅಂದಾಜಿಸಲಾಗಿದೆ. ಈ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನದಲ್ಲಿ ಲಕ್ಷಕ್ಕೂ ಹೆಚ್ಚು ಉಡಿ ಸೇವೆ ಸಮರ್ಪಿತಗೊಂಡಿದೆ. ಒಂದೂವರೆ ಲಕ್ಷಕ್ಕಿಂತ ಹೆಚ್ಚು ಲಡ್ಡು ಪ್ರಸಾದ ಖರ್ಚಾಗಿದೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.

ಸಚಿವರಿಂದ ದೇವಿ ದರ್ಶನ: ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾನುವಾರ ಮಾರಿಕಾಂಬಾ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ನಿಗಮ ಮಂಡಳಿಗಳ ಪ್ರಮುಖರು ಕೂಡ ದೇವಿಯ ದರ್ಶನ ಪಡೆದರು.

ಸಂಚಾರ ದಟ್ಟಣೆ ಸಮಸ್ಯೆ:

ವಾರಾಂತ್ಯದ ಹಿನ್ನೆಲೆಯಲ್ಲಿ ಜಾತ್ರೆಗೆ ಬಂದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಶನಿವಾರ ಸಂಜೆಯಿಂದಲೇ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿದೆ. ಅಗಸೆಬಾಗಿಲ, ಜೂ ವೃತ್ತ, ಯಲ್ಲಾಪುರ ನಾಕಾ, ಹುಬ್ಬಳ್ಳಿ ರಸ್ತೆ, ಕರಿಗುಂಡಿ ಕ್ರಾಸ್ ಸೇರಿದಂತೆ ಹಲವು ಕಡೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು