ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಆರೋಪದಲ್ಲಿ ಜೈಲುಪಾಲಾದ ತಾಯಿ: ಆರು ವರ್ಷದ ಬಾಲಕನಿಗೆ ಅತ್ತೆ ಆಸರೆ

Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಯಲ್ಲಾಪುರ: ತಂದೆ ಕೊಲೆಯಾಗಿದ್ದರೆ, ಕೃತ್ಯ ಎಸಗಿದ ಆರೋಪದಲ್ಲಿ ತಾಯಿ, ಅಜ್ಜ, ಅಜ್ಜಿ ಹಾಗೂ ಸೋದರ ಮಾವ ಜೈಲುಪಾಲಾಗಿದ್ದಾರೆ. ಇತ್ತ ಆರು ವರ್ಷದ ಬಾಲಕ ಈಗ ತಂದೆಯ ಅಕ್ಕನ (ಅತ್ತೆ) ಮಡಿಲಿನಲ್ಲಿದ್ದಾನೆ.

ಇದು ಬಳಗಾರಿನ ಅತ್ತಗಾರಿನಲ್ಲಿ ಗಂಡ ರಾಜೇಶ ನಾಯ್ಕ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶ್ವೇತಾ ಅವರ ಕುಟುಂಬದ ಸದ್ಯದ ಚಿತ್ರಣ. ರಾಜೇಶ ಮಾವನ ಮನೆಯಲ್ಲಿಯೇ ಇರುತ್ತಿದ್ದರು. ಅಲ್ಲಿ ಸುಮಾರು 30 ಗುಂಟೆ ಜಮೀನಿತ್ತು. ಜಮೀನಿನಲ್ಲಿ ಪಾಲು ಬೇಕೆಂದು ಶ್ವೇತಾ ಆಗ್ರಹಿಸುತ್ತಿದ್ದರು. ರಾಜೇಶ ಕೂಡ ಆಸ್ತಿಗಾಗಿ ಬೇಡಿಕೆ ಇಟ್ಟಿದ್ದರು. ಈ ವಿಷಯದ ಕುರಿತು ಆಗಾಗ ಜಗಳ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆ ಪಂಚರ ಸಮಕ್ಷಮ 10 ಗುಂಟೆ ಜಮೀನು ನೀಡಲು ಮಾತುಕತೆಯೂ ಆಗಿತ್ತು ಎಂದು ಪರಿಚಯಸ್ಥರು ಹೇಳಿದ್ದಾರೆ.

ಜೂನ್ 10ರಂದು ಸಂಜೆ ರಾಜೇಶ, ಮನೆಯಲ್ಲಿ ಜಗಳವಾಡುತ್ತ ಹೆಂಡತಿಗೆ ಚಾಕು ತೋರಿಸಿ ಹೆದರಿಸಿದ್ದರು. ಅದನ್ನು ತಪ್ಪಿಸಲು ಬಂದ ಮಾವ ದೀಪಕ್ ಮರಾಠಿಗೆ ಜೋರಾಗಿ ಹೊಡೆದಿದ್ದರು. ಆಗ ಚಿರೇಕಲ್ಲು ಕೆತ್ತುವ ಬಾಚಿ ದೀಪಕ್‌ ಕೈಗೆ ಸಿಕ್ಕಿದ್ದು, ಅದನ್ನು ತೆಗೆದು ಹೊಡೆದಾಗ ರಾಜೇಶ ಅಧಿಕ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು. ಜಗಳದ ಸಂದರ್ಭದಲ್ಲಿ ಹೆಂಡತಿ ಹಾಗೂ ಅತ್ತೆಯ ಶೀಲದ ಕುರಿತು ಮಾತನಾಡಿದ್ದು ಇನ್ನೂ ಹೆಚ್ಚಿನ ಸಿಟ್ಟು ತರಿಸಿತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಗಂಡನ ಮೃತದೇಹವನ್ನು ಮನೆ ಮಂದಿ ಸೇರಿ ಸ್ವಲ್ಪ ದೂರದಲ್ಲಿದ್ದ ಭತ್ತ ಒಕ್ಕುವ ಕಣದ ಬಳಿ ಸುಟ್ಟು ಹಾಕಿದರು. ಬೆಂಕಿಯ ಝಳಕ್ಕೆ ಪಕ್ಕದಲ್ಲಿದ್ದ ಸುಟ್ಟು ಹೋದ ಮರದ ಟೊಂಗೆಗಳನ್ನು ಕತ್ತರಿಸಿ ಹಾಕಿದರು ಎಂದು ಗೊತ್ತಾಗಿದೆ.

ಜೂನ್ 8ರಂದು ಸ್ನೇಹಿತರೊಂದಿಗೆ ಶಿಕಾರಿಗೆ ಹೋಗಿದ್ದ ದೇಹಳ್ಳಿ ಬಳಿಯ ಕಾಡಿನಲ್ಲಿ ಅವರ ಚಪ್ಪಲಿ, ಮೊಬೈಲ್, ಬೈಕ್ ಎಸೆದು ಬಂದರು. ಜೂನ್ 14ರಂದು ಗಂಡ ಕಾಣೆಯಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದರು. ಆಗ ತನಿಖೆ ಕೈಗೊಂಡ ಪೊಲೀಸರಿಗೆ, ದೇಹಳ್ಳಿ ಬಳಿಯಲ್ಲಿ ಬೈಕ್, ಮೊಬೈಲ್ ಸಿಕ್ಕಿತ್ತು.

ಅದನ್ನು ಪರಿಶೀಲಿಸಿದಾಗ ನಾಲ್ವರು ಬೇಟೆಗೆ ಹೋಗಿದ್ದು ಬೆಳಕಿಗೆ ಬಂತು. ಇತ್ತ ಕೊಲೆಯಾದ ರಾಜೇಶನ ಅಕ್ಕ ದೀಪಾ ಈ ನಾಲ್ವರ ಮೇಲೆ ಅನೈತಿಕ ಸಂಬಂಧದ ಕಾರಣದಿಂದಾಗಿ ರಾಜೇಶನನ್ನು ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದರು. ತನಿಖೆ ತೀವ್ರಗೊಳಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರು ಹಾಗೂ ಪಿ.ಎಸ್.ಐ ಮಂಜುನಾಥ ಗೌಡರ ತಂಡ ನಾಲ್ವರನ್ನು ಬಂಧಿಸಿತು.

‘ಆಸ್ತಿಯ ವಿಷಯಕ್ಕೆ ರಾಜೇಶ ಜಗಳವಾಡಲು ಸಾಧ್ಯವಿಲ್ಲ. ಬಳಗಾರಿನಲ್ಲಿ ನಮ್ಮದೂ ಸ್ವಲ್ಪ ಆಸ್ತಿ ಇದೆ. ಹೆಂಡತಿಯ ಅನೈತಿಕ ಸಂಬಂಧದ ಬಗ್ಗೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಿದ್ದ. ಪೊಲೀಸರಿಗೆ ನೀಡಿದ ದೂರಿನಲ್ಲಿಯೂ ಅದನ್ನೇ ತಿಳಿಸಿದ್ದೆ. ರಾಜೇಶನ ಮಗನನ್ನು ನನ್ನ ಮನೆಯಲ್ಲಿಯೇ ಇಟ್ಟು ಬೆಳೆಸುತ್ತೇನೆ. ನನಗಿರುವ ಎರಡು ಮಕ್ಕಳ ಜೊತೆ ಅವನನ್ನು ಚೆನ್ನಾಗಿ ಓದಿಸುತ್ತೇನೆ’ ಎಂದು ಮೃತ ರಾಜೇಶನ ಅಕ್ಕ ದೀಪಾ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT