ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಕಾರವಾರದಲ್ಲಿ ಶೇ 45ರಷ್ಟು ಸೂರ್ಯಗ್ರಹಣ ಗೋಚರ: ಆಸಕ್ತರಿಂದ ವೀಕ್ಷಣೆ

ಆಗಸದಲ್ಲಿ ನೆರಳು, ಬೆಳಕಿನಾಟ ಕಂಡು ಅಚ್ಚರಿಯಾದ ಕಾರವಾರದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ವಿಶ್ವದಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಕಂಕಣ ಸೂರ್ಯಗ್ರಹಣವನ್ನು ಆಸಕ್ತರು ನಗರದಲ್ಲೂ ಕಣ್ತುಂಬಿಕೊಂಡರು. ಶೇ 40ರಿಂದ 45ರಷ್ಟರ ಪ್ರಮಾಣದಲ್ಲಿ ಗ್ರಹಣವು ನಗರದಲ್ಲಿ ಗೋಚರಿಸಿತು. 

ಬೆಳಿಗ್ಗೆ 10.04 ನಿಮಿಷಕ್ಕೆ ಶುರುವಾದ ಗ್ರಹಣವು 11.30ಕ್ಕೆ ಮಧ್ಯಭಾಗ ತಲುಪಿತು. 1.30ರ ಸುಮಾರಿಗೆ ಸೂರ್ಯನಿಗೆ ಗ್ರಹಣ ಮೋಕ್ಷವಾಯಿತು. ಕೋಡಿಬಾಗದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಟೆಲಿಸ್ಕೋಪ್‌ನಲ್ಲಿ ನೆರಳು ಮೂಡಿಸಿ, ಪಿನ್‌ಹೋಲ್ ಕ್ಯಾಮೆರಾ ಬಳಸಿ ಗ್ರಹಣದ ಪ್ರತಿ ಹಂತವನ್ನೂ ದಾಖಲಿಸಿಕೊಳ್ಳಲಾಯಿತು. ಆಸಕ್ತ ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರು ಕೇಂದ್ರಕ್ಕೆ ಬಂದು ವಿಶೇಷ ಕನ್ನಡಕ ಧರಿಸಿ ಬೆಳಕು, ನೆರಳಿನಾಟವನ್ನು ನೋಡಿ ಸಂಭ್ರಮಿಸಿದರು.

ಸೂರ್ಯನಿಗೆ ಆಗಾಗ ಮೋಡ ಅಡ್ಡಬಂದರೂ ಖಗೋಳದ ವಿಸ್ಮಯ ವೀಕ್ಷಣೆಗೆ ಅಡ್ಡಿಯಾಗಲಿಲ್ಲ. ಆದರೆ, ಕೊರೊನಾ ಭೀತಿಯಿಂದ ಭಾನುವಾರವಾದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರಲಿಲ್ಲ. 

ಕಳೆದ ವರ್ಷ ಡಿ.26ಕ್ಕೆ ಆಗಿದ್ದ ಕಂಕಣ ಸೂರ್ಯಗ್ರಹಣವು ನಗರದಲ್ಲಿ ಶೇ 78ರಷ್ಟು ಗೋಚರಿಸಿತ್ತು. ಈ ಬಾರಿ ಅಷ್ಟು ಪ್ರಮಾಣದಲ್ಲಿ ಕಾಣದಿದ್ದರೂ ಆಗಸದ ವಿಸ್ಮಯ ಇಲ್ಲೂ ಕಾಣಿಸಿದ್ದು ಸಂತಸ ತಂದಿದೆ ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಂಜೀವ ದೇಶಪಾಂಡೆ ತಿಳಿಸಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಗುನಗಿ, ಕವಿತಾ ಮೇಸ್ತ ಅವರೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಸಮುದ್ರದಲ್ಲಿ ಸ್ನಾನ: ಸೂರ್ಯಗ್ರಹಣದ ಬಳಿಕ ನಗರದ ಹಲವರು ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮುದ್ರದಲ್ಲಿ ಸ್ನಾನ ಮಾಡಿದರು. ಸಮುದ್ರ ತಟದಲ್ಲೇ ಜಪ, ತಪ ಮಾಡುತ್ತಿದ್ದುದೂ ಕಂಡುಬಂತು. ಹಲವರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬಾರದೇ ಉಪವಾಸ ಪಾಲನೆ ಮಾಡಿದರು. ಗ್ರಹಣ ಮುಕ್ತಾಯವಾದ ಬಳಿಕ ಮನೆಯ ಆವರಣವನ್ನು ತೊಳೆದು, ಸ್ನಾನ ಮಾಡಿದ ಬಳಿಕ ಊಟ, ಫಲಾಹಾರ ಸೇವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು