ಭಾನುವಾರ, ಏಪ್ರಿಲ್ 11, 2021
33 °C

ಅಧಿಕಾರಿ ಬಳಿ ಸೋಂಕಿತರ ದಾಖಲೆ ಇರಲಿ: ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೋವಿಡ್ 19 ಕಾರಣಕ್ಕೆ ಮನೆ ಅಥವಾ ಬಡಾವಣೆಗಳನ್ನು ಸೀಲ್‌ಡೌನ್ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳ ಬಳಿ ಕಡ್ಡಾಯವಾಗಿ ಸೋಂಕಿತ ವ್ಯಕ್ತಿಯ ಪಾಸಿಟಿವ್ ವರದಿಯ ದಾಖಲೆ ಇರಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸೋಮವಾರ ಇಲ್ಲಿ ಕರೆದಿದ್ದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಸೋಂಕು ದೃಢಪಟ್ಟ ವ್ಯಕ್ತಿಯ ಮನೆ, ಬಡಾವಣೆಯನ್ನು ಸೀಲ್‌ಡೌನ್ ಮಾಡಲು ಹೋದರೆ, ಅಲ್ಲಿನ ನಿವಾಸಿಗಳು ಈ ಬಗ್ಗೆ ದಾಖಲೆ ಕೇಳುತ್ತಾರೆ. ಆದರೆ, ನಮ್ಮ ಬಳಿ ದಾಖಲೆಗಳಿರುವುದಿಲ್ಲ’ ಎಂದು ಪಿಡಿಒ ಪ್ರೀತಿ ಶೆಟ್ಟಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೇರಿ, ‘ಆರೋಗ್ಯ ಇಲಾಖೆಯಿಂದ ಬರುವ ವರದಿಯನ್ನು, ಸೀಲ್‌ಡೌನ್ ಮಾಡಲು ತೆರಳುವ ಅಧಿಕಾರಿಗೆ ನೀಡಬೇಕು’ ಎಂದರು.

‘ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ, ಹೆಚ್ಚುವರಿ ಹಾಸಿಗೆಗಳು ಅಗತ್ಯವಿದ್ದಲ್ಲಿ, ಮೂರು ದಿನಗಳೊಳಗಾಗಿ ಸ್ಥಳ ಗುರುತಿಸಬೇಕು’ ಎಂದು ತಹಶೀಲ್ದಾರರಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿ, ‘ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ತಾಲ್ಲೂಕಿನ 227 ಗ್ರಾಮ ಕಾವಲು ಸಮಿತಿ, ನಗರದಲ್ಲಿ 32 ನಗರ ಕಾವಲು ಸಮಿತಿ ರಚಿಸಲಾಗಿದೆ. ಸಂಬಂಧಪಟ್ಟ ಸಮಿತಿ ಸದಸ್ಯರು ಹೊರ ರಾಜ್ಯಗಳಿಂದ ಬಂದವರ ಕ್ವಾರಂಟೈನ್ ಬಗ್ಗೆ ನಿಗಾವಹಿಸಬೇಕು ಮತ್ತು ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ಮೇಲಧಿಕಾರಿಗಳಿಗೆ ತಿಳಿಸುವ, ಆಸ್ಪತ್ರೆಗೆ ಕಳುಹಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಲಾಗಿದೆ’ ಎಂದರು.

ತೋಟಗಾರಿಕಾ ಇಲಾಖೆ ಅಧಿಕಾರಿ ಸತೀಶ ಹೆಗಡೆ ಮಾತನಾಡಿ, ‘ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಗೆ ಆಗಿರುವ ಬೆಳೆಹಾನಿ ಕುರಿತು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದರು.

ತಾಲ್ಲೂಕಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹ 6 ಕೋಟಿ ಕಾಮಗಾರಿ ಬಾಕಿ ಇದೆ. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ಲಕ್ಷ್ಯವಹಿಸಿ, ಕಾಮಗಾರಿ ಮಾಡಿಸಬೇಕು ಎಂದು ಕಾಗೇರಿ ಸೂಚಿಸಿದರು. ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಆದರೆ, ಶಿಕ್ಷಕರು ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಶಾಲೆಗಳಲ್ಲಿ ಚಟುವಟಿಕೆಗಳನ್ನು ನಡೆಸಬೇಕು ಎಂದು ಅವರು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಅವರಿಗೆ ತಿಳಿಸಿದರು.

ಜಾನುವಾರುಗಳ ಕಾಲು ಬಾಯಿ ಜ್ವರಕ್ಕೆ ಲಸಿಕೆ ನೀಡುವ ಕಾರ್ಯ ಶೀಘ್ರ ಪ್ರಾರಂಭವಾಗಬೇಕು. ಯುಐಡಿ (ವಿಶಿಷ್ಟ ಗುರುತಿನ ಕಾರ್ಡ್‌) ಯೋಜನೆ ಮತ್ತು ಇದನ್ನು ಜೋಡಣೆ ಮಾಡಬಾರದು ಎಂದು ಕಾಗೇರಿ, ಪಶುಸಂಗೋಪನಾ ಇಲಾಖೆ ಅಧಿಕಾರಿಗೆ ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ, ಉಷಾ ಹೆಗಡೆ, ಡಿವೈಎಸ್ಪಿ ಜಿ.ಟಿ.ನಾಯಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು