ಗುರುವಾರ , ಸೆಪ್ಟೆಂಬರ್ 23, 2021
22 °C
ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಯತ್ನ: ಸಚಿವ ಶಿವರಾಮ ಹೆಬ್ಬಾರ

ನೆರೆಯಿಂದ ಉತ್ತರ ಕನ್ನಡದಲ್ಲಿ ₹ 700 ಕೋಟಿಗೂ ಅಧಿಕ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಈ ವರ್ಷ ಜಿಲ್ಲೆಯಲ್ಲಿ ನೆರೆಯಿಂದ ₹700 ಕೋಟಿಗೂ ಅಧಿಕ ಹಾನಿಯಾಗಿದೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದುಕೊಳ್ಳಲು ಅಗತ್ಯ ಕ್ರಮಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕಾರ್ಮಿಕ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ನೆರೆ ಮತ್ತು ಕೋವಿಡ್ ನಿಯಂತ್ರಣ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ನಗರದಲ್ಲಿ ಶನಿವಾರ ಮಾಹಿತಿ ಪಡೆದುಕೊಂಡ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಕಳಚೆ, ಅಣಶಿ, ಭಾಶಿ ಮುಂತಾದ ಕಡೆಗಳಲ್ಲಿ ಊಹೆಗೂ ಮೀರಿದ ಹಾನಿಯಾಗಿದೆ. ಇದನ್ನು ಸಮೀಕ್ಷೆ ಮಾಡಲು ಕೇಂದ್ರದಿಂದಲೂ ಒಂದು ತಂಡ ಜಿಲ್ಲೆಗೆ ಭೇಟಿ ನೀಡಲಿದೆ. ಅಲ್ಲದೇ ಈ ರೀತಿ ಆಗಲು ನಿಖರವಾದ ಕಾರಣಗಳೇನು ಎಂದು ತಿಳಿದುಕೊಳ್ಳಲು ತಜ್ಞರ ತಂಡವನ್ನು ಕರೆಸಲಾಗುತ್ತಿದೆ. ಅವರು ನೀಡುವ ಪ್ರಾಥಮಿಕ ವರದಿಯನ್ನು ಆಧರಿಸಿ ಶಾಶ್ವತ ಪರಿಹಾರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಕೆಲವು ಪ್ರದೇಶಗಳಲ್ಲಿ ಪ್ರತಿ ವರ್ಷ ನೆರೆ ಬರುತ್ತಿದೆ. ಕೆಲವೆಡೆ ಭೂಕುಸಿತವಾಗುತ್ತಿದೆ. ಅಂಥ ಪ್ರದೇಶಗಳಲ್ಲಿ ವಾಸಿಸುವವರು ಶಾಶ್ವತ ಪುನರ್ವಸತಿಗೆ ಸಿದ್ಧವಿದ್ದರೆ ಅವರಿಗೆ ಕಂದಾಯ ಜಾಗವನ್ನು ನೀಡಲು ಸರ್ಕಾರ ಸಿದ್ಧವಿದೆ. ಈಗಾಗಲೇ ಒಂದಷ್ಟು ಕಡೆಗಳಲ್ಲಿ ಜಮೀನು ಗುರುತಿಸಲಾಗಿದೆ’ ಎಂದೂ ಸ್ಪಷ್ಟಪಡಿಸಿದರು.

ವರದಿಗೆ ಸೂಚನೆ: ‘ಜಿಲ್ಲೆಯಲ್ಲಿ ಸಣ್ಣ ನೀರಾವರಿಗೆ ₹110 ಕೋಟಿ ಹಾಗೂ ನಗರ ಪ್ರದೇಶಗಳ ವಿವಿಧ ಕಾಮಗಾರಿಗಳಿಗೆ ₹10 ಕೋಟಿಗೂ ಅಧಿಕ ಮೊತ್ತದ ಹಾನಿಯಾಗಿದೆ. ಅವುಗಳನ್ನು ನಾಳೆಯೇ (ಆ.8) ವರದಿ ಮಾಡಿ ತಲುಪಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ದಾಖಲೆ ಪಡೆಯಲು ಸಹಕಾರ:

‘ನೆರೆಯಿಂದ ಮನೆಗಳಿಗೆ ನೀರು ನುಗ್ಗಿ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡವರಿಗೆ ನೆರವು ನೀಡಲಾಗುತ್ತಿದೆ. ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಸಂತ್ರಸ್ತರಿಗೆ ಒಂದೇ ವೇದಿಕೆಯಡಿ ಅಗತ್ಯ ದಾಖಲೆಗಳನ್ನು ಒದಗಿಸಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿ.ಯು ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಗಳನ್ನು ಕಳೆದುಕೊಂಡಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒದಗಿಸಿ ಕೊಡಲಿದ್ದಾರೆ’ ಎಂದು ಶಿವರಾಮ ಹೆಬ್ಬಾರ ತಿಳಿಸಿದರು.

186 ಕ್ವಾರಂಟೈನ್ ಕೇಂದ್ರ:

‘ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಗತ್ಯವಿದ್ದರೆ ಮಾತ್ರ ಹೋಂ ಕ್ವಾರಂಟೈನ್ ಮಾಡಲು ತಿಳಿಸಲಾಗಿದೆ. ಜಿಲ್ಲೆಯಾದ್ಯಂತ 186 ಸ್ಥಳಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಈಗ ಆಮ್ಲಜನಕದ ಸಿಲಿಂಡರ್, ಹಾಸಿಗೆ, ಆಂಬುಲೆನ್ಸ್ ಕೊರತೆಯಿಲ್ಲ. ಪ್ರಸ್ತುತ ಮೂಲ ಸೌಕರ್ಯಗಳ ಕೊರತೆಯಿಲ್ಲ. ಮತ್ತೊಮ್ಮೆ ಜಿಲ್ಲೆಯು ಅಘೋಷಿತ ಬಂದ್ ಆಗದಂತೆ ನೋಡಿಕೊಳ್ಳಲು ಜನ ಸಹಕರಿಸಬೇಕು’ ಎಂದು ಸಚಿವ ಹೆಬ್ಬಾರ ಮನವಿ ಮಾಡಿದರು.

ಸಭೆ ರದ್ದು: ಅಂಕೋಲಾದ ಬಾಳೆಗುಳಿ ಬಳಿ ಕಾರು ಅಪಘಾತವಾಗಿ ಸಿದ್ದಾಪುರದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾರುತಿ ಮುದುಕಣ್ಣನವರ ಅಪಘಾತದಲ್ಲಿ ಮೃತಪಟ್ಟರು. ಹಾಗಾಗಿ, ಕಾರವಾರದಲ್ಲಿ ಶನಿವಾರ ಕರೆಯಲಾಗಿದ್ದ ಸಭೆಯನ್ನು ಸಚಿವ ಹೆಬ್ಬಾರ ರದ್ದು ಪಡಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಅಣಶಿಯ ಭೂ ಕುಸಿತದ ಪ್ರದೇಶ, ಕದ್ರಾ ಹಾಗೂ ಮಲ್ಲಾಪುರದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.