ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮುದುಡಿಸುತ್ತಿದೆ ತಣ್ಣನೆ ನೆಲಹಾಸು: ನೆಲದಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ

ಮುಂಡಗೋಡ: ಶಾಲಾ ಕೊಠಡಿಗಳಲ್ಲಿ ಹಸಿ ನೆಲದಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ
Last Updated 15 ಜುಲೈ 2022, 19:30 IST
ಅಕ್ಷರ ಗಾತ್ರ

ಮುಂಡಗೋಡ: ತರಗತಿ ಕೊಠಡಿಗಳಲ್ಲಿ ತಣ್ಣಗಿರುವ ನೆಲಹಾಸು ಮಕ್ಕಳನ್ನು ಮುದುಡುವಂತೆ ಮಾಡುತ್ತದೆ. ಕೆಸರಿನ ಕಾಲಿನಲ್ಲಿಯೇ ಬಂದು, ಮನೆಯಿಂದ ತಂದಿರುವ ಪ್ಲಾಸ್ಟಿಕ್‌, ಸಣ್ಣ ಚಾಪೆಯನ್ನು ಹಾಸಿಕೊಂಡು ನೆಲದ ಮೇಲೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ.

ತಾಲ್ಲೂಕಿನ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಬೆರಳೆಣಿಕೆಯಷ್ಟು ಸರ್ಕಾರಿ ಶಾಲೆಗಳ ಆರು ಮತ್ತು ಏಳನೇ ತರಗತಿಯ ಮಕ್ಕಳಿಗೆ ಮಾತ್ರ ಬೆಂಚುಗಳಿವೆ. ಹಲವು ಶಾಲೆಗಳಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಶಾಲೆಯ ಆವರಣದಲ್ಲಿ ನೀರು ನಿಂತು ರಾಡಿಯಾಗಿರುತ್ತದೆ. ಮಳೆಗಾಲದಲ್ಲಿ ಮಕ್ಕಳು ಅದೇ ರಾಡಿಯಲ್ಲಿ ಆಡಿ, ಓಡಾಡಿ ತರಗತಿಗೆ ಬಂದು ಕುಳಿತುಕೊಳ್ಳುತ್ತಾರೆ. ನೆಲವೂ ಹಸಿಯಾಗಿರುತ್ತದೆ. ಬೆಚ್ಚಗಿನ ವಾತಾವರಣದಲ್ಲಿ ಮಕ್ಕಳು ಕಲಿಯಬೇಕೆಂಬ ಬಯಕೆ ಎಲ್ಲ ಪಾಲಕರದ್ದು. ಆದರೆ, ಶಾಲಾ ಕೊಠಡಿಗಳಲ್ಲಿ ಮಕ್ಕಳಿಗೆ ಬೆಂಚು ಅಥವಾ ಕಟ್ಟಿಗೆಯ ಮಣೆಗಳ ವ್ಯವಸ್ಥೆ ಇಲ್ಲ’ ಎಂದು ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ಪಾಲಕ ಸಂತೋಷ ದೂರಿದರು.

‘ದಿನವೂ ಮಕ್ಕಳು ಚಾಪೆ, ಪ್ಲಾಸ್ಟಿಕ್‌ ಚೀಲವನ್ನು ಒಯ್ದು ಅದರ ಮೇಲೆ ಕುಳಿತುಕೊಳ್ಳಬೇಕು. ಒಂದೊಂದು ಸಲ ಮನೆಯಿಂದ ಒಯ್ದಿರುವ ಚಾಪೆ, ಚೀಲವೂ ಮಳೆಗೆ ನೆನೆದು ಹಸಿಯಾಗಿರುತ್ತದೆ. ಅವುಗಳ ಮೇಲೆಯೇ ಮಕ್ಕಳು ಕುಳಿತುಕೊಂಡು ಪಾಠ ಕೇಳುತ್ತಾರೆ’ ಎಂದು ಬೇಸರಿಸಿದರು.

‘ಮಕ್ಕಳ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಹಲವು ಮಕ್ಕಳು ಜ್ವರ, ನೆಗಡಿ, ಕೆಮ್ಮು ಎಂದು ಅನಾರೋಗ್ಯಕ್ಕೆ ಈಡಾಗಿ ಪಾಠದಿಂದ ವಂಚಿತರಾಗುತ್ತಾರೆ. ಮಕ್ಕಳ ಅನಾರೋಗ್ಯಕ್ಕೆ ಪರೋಕ್ಷವಾಗಿ ನಾವೇ ಕಾರಣರಾಗುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು. ಸರ್ಕಾರದ ಜೊತೆ ಹಳೆಯ ವಿದ್ಯಾರ್ಥಿಗಳು, ಪಾಲಕರೂ ಕೈಜೋಡಿಸಿದರೆ ಎಷ್ಟೋ ಶಾಲೆಗಳಲ್ಲಿ ಸಮಸ್ಯೆ ಬಗೆಹರಿಯುತ್ತವೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀಧರ ಉಪ್ಪಾರ್.‌

ಪಾಲಕರ ವಿರೋಧ:

ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ನೆಲದ ಮೇಲೆ ಕುಳಿತುಕೊಂಡು ಪಾಠ ಕೇಳುತ್ತಿರುವುದಕ್ಕೆ ಹಲವು ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳಿಗೆ ಅಗತ್ಯವಿರುವ ಆಸನಗಳನ್ನು ಪಾಲಕರೇ ಮುಂದಾಗಿ ಕೊಡಿಸುವ ವ್ಯವಸ್ಥೆ ಆಗಲಿ ಎಂಬ ಉದ್ದೇಶದಿಂದ ಈಚೆಗೆ ಸಭೆ ನಡೆಸಲಾಗಿತ್ತು.

‘ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ಕಟ್ಟಲು ಆಗದ ಹಲವು ಬಡ ಪಾಲಕರು, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಸರ್ಕಾರವೇ ಮಕ್ಕಳಿಗೆ ಮೂಲಸೌಕರ್ಯ ಒದಗಿಸಬೇಕು. ಸಚಿವ ಶಿವರಾಮ ಹೆಬ್ಬಾರ ಅವರಲ್ಲಿ ಮನವಿ ಮಾಡಬೇಕು. ಅಲ್ಲದೇ ಶಾಲಾಭಿವೃಧ್ಧಿಗೆ ಬರುವ ಅನುದಾನವನ್ನೂ ಆಸನದ ವ್ಯವಸ್ಥೆಗೆ ಬಳಸಬೇಕು’ ಎಂದು ಹಲವು ಪಾಲಕರು ಒತ್ತಾಯಿಸಿದ್ದರು.

‘ಮಾಹಿತಿ ನೀಡಲು ಸೂಚನೆ’:

‘ತಾಲ್ಲೂಕಿನ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್‌ಗಳ ವ್ಯವಸ್ಥೆಯಿಲ್ಲ ಎಂಬ ಮಾಹಿತಿಯಿದೆ. ಯಾವ ಶಾಲೆಗಳಲ್ಲಿ ಎಷ್ಟು ಆಸನಗಳ ಅಗತ್ಯವಿದೆ ಎಂಬ ಮಾಹಿತಿ ನೀಡುವಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. 1ರಿಂದ 3ನೇ ತರಗತಿಗಳ ಮಕ್ಕಳು ನಲಿಕಲಿ ಶಿಕ್ಷಣ ಪಡೆಯುತ್ತಾರೆ. ಹಾಗಾಗಿ ಅವರು ನೆಲದ ಮೇಲೆಯೇ ವೃತ್ತದಲ್ಲಿ ಕುಳಿತು ಕಲಿಯಬೇಕು’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ.

‘ಹೆಚ್ಚಿನ ತರಗತಿಗಳ ಮಕ್ಕಳಿಗೆ ಕಟ್ಟಿಗೆಯ ಮಣೆ ಅಥವಾ ಬೆಂಚ್‌ ಬೇಕಾಗುತ್ತದೆ. ಆದರೆ, ಕೆಲವು ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯವರು, ಪಾಲಕರು ಸೇರಿಕೊಂಡು ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇನ್ನೂ ಕೆಲವು ಶಾಲೆಗಳಿಗೆ ದಾನಿಗಳು ನೆರವು ನೀಡಿದ್ದಾರೆ. ಎಲ್ಲ ಶಾಲೆಗಳಿಗೂ ಸರ್ಕಾರವೇ ವ್ಯವಸ್ಥೆ ಮಾಡಿಕೊಡುವುದು ಕಷ್ಟವಾಗಲಿದೆ’ ಎಂದು ಅಭಿಪ್ರಾಯ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT