ಶುಕ್ರವಾರ, ಡಿಸೆಂಬರ್ 4, 2020
22 °C
ಪದವಿ ಕಾಲೇಜುಗಳ ಆರಂಭಕ್ಕೆ ಸಿದ್ಧತೆ: ವಸತಿ ನಿಲಯಗಳ ತೆರೆಯುವ ಬಗ್ಗೆ ಬಾರದ ಸೂಚನೆ

ಅಂಕೋಲಾ: ಗೊಂದಲದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು

ಮಾರುತಿ ಹರಿಕಂತ್ರ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ನ.17ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರವು ಸಿದ್ಧತೆ ನಡೆಸಿದೆ. ಆದರೆ, ವಸತಿ ನಿಲಯಗಳ ಆರಂಭ ಕುರಿತು ಸಿದ್ಧತೆಗೆ ಯಾವುದೇ ಸೂಚನೆ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ಕೋವಿಡ್ ಕಾರಣದಿಂದ ಹಲವು ತಿಂಗಳ ನಂತರ ಪದವಿ ಕಾಲೇಜುಗಳ ಪ್ರಾರಂಭವಾಗುತ್ತಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಯು.ಜಿ.ಸಿ ನಿಯಮಾವಳಿಗಳನ್ನು ಸಹ ಬಿಡುಗಡೆ ಮಾಡಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪೋಷಕರು ಹಾಗೂ ವಸತಿ ನಿಲಯಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಗಳ ಪಟ್ಟಿಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಇದುವರೆಗೂ ಹಿಂದುಳಿದ ವರ್ಗಗಳ ಇಲಾಖೆಗೆ ಹಾಸ್ಟೆಲ್ ಆರಂಭಿಸಲು ಯಾವುದೇ ಸೂಚನೆ ನೀಡಿಲ್ಲ.

ತಾಲೂಕಿನ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ 180ರಿಂದ 200 ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿದ್ದಾರೆ. ಕುಗ್ರಾಮಗಳಾದ ಅಚವೆ, ಹಿಲ್ಲೂರು, ಕುಂಟಗಣಿ, ಸುಂಕಸಾಳ, ಅಂಗಡಿಬೈಲ್, ರಾಮನಗುಳಿ, ಮಾರುಗದ್ದೆ, ಹೊನ್ನಳ್ಳಿ, ಚೆನಗಾರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಲ್ಲಾಪುರ, ಹೊನ್ನಾವರ, ಕಲಘಟಗಿ, ವಿಜಯಪುರ, ಬಾಗಲಕೋಟೆ ಭಾಗದಿಂದ ಬಂದಿರುವ ಬಡ ಕೂಲಿಕಾರ್ಮಿಕರ ಮಕ್ಕಳೂ ಪ್ರವೇಶ ಪಡೆದಿದ್ದಾರೆ.

ಕುಗ್ರಾಮಗಳ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆಯಿಂದಾಗಿ ಆನ್‌ಲೈನ್ ಪಾಠದಿಂದ ವಂಚಿತರಾಗಿದ್ದಾರೆ. ಒಂದೊಮ್ಮೆ ಕಾಲೇಜುಗಳನ್ನು ಆರಂಭಿಸಿ ವಸತಿ ನಿಲಯಗಳನ್ನು ತೆರೆಯದಿದ್ದರೆ ಈ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸಾಧ್ಯವಾಗುವುದಿಲ್ಲ. ಅವರು ಪುನಃ ಶಿಕ್ಷಣದಿಂದ ವಂಚಿತರಾಗುವ ಆತಂಕ ಪಾಲಕರದ್ದಾಗಿದೆ.

ತಾಲ್ಲೂಕಿನಲ್ಲಿ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಆದ್ದರಿಂದ ಯು.ಜಿ.ಸಿ ನಿಯಮಾವಳಿ ಪ್ರಕಾರ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗದು. ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿಯ ಅನಿವಾರ್ಯತೆ ಉಂಟಾಗುತ್ತದೆ. ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಸರ್ಕಾರ ಈ ಬಗ್ಗೆ ಆಲೋಚಿಸಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.

‘ನಿಯಮಾವಳಿ ಪಾಲನೆ’: ‘ವಸತಿ ನಿಲಯಗಳನ್ನು ತೆರೆಯುವ ಬಗ್ಗೆ ಸರ್ಕಾರದಿಂದ ಇದುವರೆಗೂ ಯಾವುದೇ ಸೂಚನೆ ಬಂದಿಲ್ಲ. ಈಗಾಗಲೇ ಅಂತಿಮ ಪದವಿ ವಿದ್ಯಾರ್ಥಿಗಳ ಪರೀಕ್ಷೆಯ ಸಂದರ್ಭದಲ್ಲಿ ವಸತಿ ನಿಲಯಗಳನ್ನು ತೆರೆಯಲಾಗಿತ್ತು. ಆಗ ಸಾಕಷ್ಟು ಸುರಕ್ಷತೆ ವಹಿಸಿ ಕಾರ್ಯನಿರ್ವಹಿಸಿದ್ದೇವೆ. ಸರ್ಕಾರದ ನಿಯಮಾವಳಿಯಂತೆ ವಸತಿ ನಿಲಯಗಳನ್ನು ತೆರೆಯಲಾಗುವುದು’ ಎಂದು ಬಿ.ಸಿ.ಎಂ ಹಾಸ್ಟೆಲ್‌ಗಳ ಅಧಿಕಾರಿಗಳು ಹೇಳಿದ್ದಾರೆ.

---

ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವವರು ಪ್ರತಿಭಾವಂತ, ಬಡ ವಿದ್ಯಾರ್ಥಿಗಳು. ಸರ್ಕಾರ ಅವರ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿ.
- ಮಹೇಶ ನಾಯಕ, ಹಿರಿಯ ಉಪನ್ಯಾಸಕ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು