ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ: ಕೃಷಿಕರಿಗೆ ಖುಷಿ ಕೊಟ್ಟ ಡೌಗೇರಿ ಕೆರೆ ಅಭಿವೃದ್ಧಿ

ಕಾರ್ಪೊರೆಟ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಅಭಿವೃದ್ಧಿ
Last Updated 13 ಜೂನ್ 2020, 19:30 IST
ಅಕ್ಷರ ಗಾತ್ರ

ಹಳಿಯಾಳ: ಪಟ್ಟಣದ ಹೊಲಸನ್ನು ಒಡಲೊಳಗೆ ಸೇರಿಸಿಕೊಳ್ಳುತ್ತಿದ್ದ ಡೌಗೇರಿ ಕೆರೆಗೆ ಈಗ ಮಲಿನಮುಕ್ತವಾಗುವ ಕಾಲ ಕೂಡಿಬಂದಿದೆ. ಹೊಲಸನ್ನು ಬಗೆದು ಎತ್ತುತ್ತಿರುವ ಜೆಸಿಬಿ ಯಂತ್ರಗಳು ಶುದ್ಧ ನೀರಿನ ಸಂಗ್ರಹಕ್ಕೆ ಅನುಕೂಲ ಮಾಡಿಕೊಡುತ್ತಿವೆ.

ಹೊರವಲಯದಲ್ಲಿರುವ ಎಂಟು ಎಕರೆ ವಿಸ್ತೀರ್ಣದಲ್ಲಿರುವ ಡೌಗೇರಿ ಕೆರೆಗೆ ಪಟ್ಟಣದ ಎಲ್ಲ ಕಾಲುವೆ, ಚರಂಡಿಗಳ ನೀರು ಸೇರುತ್ತಿತ್ತು. ಸಾರ್ವಜನಿಕರು ಈ ಕೆರೆಯ ನೀರನ್ನು ಬಳಸದ ಕಾರಣ ಪಾಳುಬಿದ್ದ ಕೆರೆಯಾಗಿ ಇದು ಮಾರ್ಪಾಟಾಗಿತ್ತು. ಕೆರೆಯ ಕೆಳಭಾಗದ ರೈತರು ಸ್ವಲ್ಪ ಪ್ರಮಾಣದ ನೀರನ್ನು ಹೊಲ–ಗದ್ದೆಗಳಿಗೆ ಬಳಸುತ್ತಿದ್ದರು.

ಶಾಸಕ ಆರ್.ವಿ.ದೇಶಪಾಂಡೆ ಅವರು ಸ್ಥಳೀಯರೊಂದಿಗೆ ಚರ್ಚಿಸಿ, ಕೆರೆ ಅಭಿವೃದ್ಧಿಗೆ ಪ್ರಯತ್ನಿಸಿದರು. ಶ್ರೀ ಸಿಮೆಂಟ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ ಈಗ ₹ 99 ಲಕ್ಷದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ನಡೆದಿದೆ.

‘ಕೆರೆಯ ಸುತ್ತ 650 ಮೀಟರ್ ಉದ್ದದ ವಾಕಿಂಗ್ ಪಾತ್ ನಿರ್ಮಿಸಿ, ಜನರಿಗೆ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಮಲಿನ ನೀರು ಕೆರೆಗೆ ಸೇರದಂತೆ ಮಾಡಲು, ಪಕ್ಕದಲ್ಲಿ ಬೃಹತ್ ಕಾಲುವೆ ನಿರ್ಮಿಸಲಾಗಿದೆ. ಹೀಗಾಗಿ, ಕೊಳಚೆ ನೀರು ಈ ಕಾಲುವೆ ಮೂಲಕ ಮುಂದಕ್ಕೆ ಹೋಗುತ್ತದೆ. ಕೆರೆಯಲ್ಲಿ ನೀರನ್ನು ಉಳಿಸಿಕೊಳ್ಳಲು ಸುತ್ತಲೂ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿದೆ’ ಎನ್ನುತ್ತಾರೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸಂಜು ನಾಯ್ಕ.

ಕಳೆದ ಮೂರು ವರ್ಷಗಳಿಂದ ಹಳಿಯಾಳದಲ್ಲಿ ಸಮರ್ಪಕ ಮಳೆಯಾಗದೇ, ತಾಲ್ಲೂಕಿನ ಬಹುತೇಕ ಎಲ್ಲ ಕೆರೆಗಳ ಒಡಲು ಬರಿದಾಗಿದ್ದವು. ಪರಿಣಾಮವಾಗಿ ಅಂತರ್ಜಲ ಮಟ್ಟ ಕೂಡ ಇಳಿಕೆಯಾಗಿತ್ತು. ಈ ಸಂದರ್ಭದಲ್ಲಿ ವಿ.ಆರ್.ಡಿ.ಎಂ ಟ್ರಸ್ಟ್ ಅನೇಕ ಕಾರ್ಪೊರೆಟ್ ಕಂಪನಿಗಳನ್ನು ಸಂಪರ್ಕಿಸಿ, ಅವುಗಳ ಸಿಎಸ್‌ಆರ್ ನಿಧಿಯಲ್ಲಿ ಕೆರೆ ಪುನರುಜ್ಜೀವನ ಕಾರ್ಯವನ್ನು ನಡೆಸಿದೆ. 154 ಕೆರೆಗಳ ಹೂಳೆತ್ತಿ, ಅದನ್ನು ರೈತರ ಗದ್ದೆಗೆ ಸಾಗಿಸಲಾಗಿದೆ. ಫಲವತ್ತಾದ ಮಣ್ಣಿನಿಂದ ಗದ್ದೆಯಲ್ಲಿ ಉತ್ತಮ ಫಸಲು ಬರುತ್ತಿದೆ. ಅಂತರ್ಜಲ ಮಟ್ಟ ಏರಿಕೆಯಾಗಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿದೆ.

ಪಟ್ಟಣದ ಮೋತಿಕೆರೆ, ಪೇಟೆ ಬಸವೇಶ್ವರ ದೇವಾಲಯ ಸಮೀಪದ ಬಸಪ್ಪ ಹೊಂಡ ಕೂಡ ಅಭಿವೃದ್ಧಿ ಕಾಣುತ್ತಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲೂ ಅನೇಕ ಕೆರೆಗಳ ಅಭಿವೃದ್ಧಿಗೆ ತಾಲ್ಲೂಕು ಪಂಚಾಯ್ತಿ ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT