ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಆಡಳಿತ ಹಸ್ತಾಂತರ ವಿಳಂಬ

ಶ್ರೀ ಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿ ಅಸಮಾಧಾನ
Last Updated 4 ಮೇ 2021, 14:20 IST
ಅಕ್ಷರ ಗಾತ್ರ

ಗೋಕರ್ಣ: ‘ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು 15 ದಿನಗಳ ಒಳಗೆ ಸಮಿತಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಗಡುವು ಸೋಮವಾರ ಮುಗಿದಿದೆ. ಆದರೆ, ಈ ಪ್ರಕ್ರಿಯೆ ಇನ್ನೂ ಆಗಿಲ್ಲ’ ಎಂದು ಶ್ರೀ ಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಸಮಿತಿಯ ಪ್ರಮುಖರು ಮಂಗಳವಾರ ಸಭೆ ಸೇರಿ ರಾಮಚಂದ್ರಾಪುರ ಮಠ ಮತ್ತು ಸರ್ಕಾರದ ನಡೆಯನ್ನು ಖಂಡಿಸಿದರು.

ಸಮಿತಿಯ ಅಧ್ಯಕ್ಷ ಗಣಪತಿ ಹಿರೇ ಮಾತನಾಡಿ, ‘ರಾಮಚಂದ್ರಾಪುರ ಮಠ ಮತ್ತು ಸರ್ಕಾರವು ಸುಪ್ರೀಂಕೋರ್ಟ್ ಆದೇಶವನ್ನೇ ಧಿಕ್ಕರಿಸಿದಂತಾಗಿದೆ. ದೇವಸ್ಥಾನವನ್ನು 2008ರಲ್ಲಿ ಮಠಕ್ಕೆ ಹಸ್ತಾಂತರಿಸುವಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಮಾಡಿದ ದೂರವಾಣಿ ಕರೆಯನ್ನು ಆಧರಿಸಿ ಕುಮಟಾ ಉಪ ವಿಭಾಗಾಧಿಕಾರಿ ದೇವಸ್ಥಾನವನ್ನು ಹಸ್ತಾಂತರಿಸಿದ್ದರು. ಆದರೆ, ಈಗ ಸುಪ್ರೀಂಕೋರ್ಟ್ ಆದೇಶಿಸಿದರೂ ಸರ್ಕಾರ ಪುನಃ ಹಸ್ತಾಂತರ ಮಾಡಿಕೊಂಡಿಲ್ಲ’ ಎಂದು ಹೇಳಿದರು.

‘ದಿನ ಕಳೆದ ಹಾಗೆ ದೇವಸ್ಥಾನದ ಅಮೂಲ್ಯವಾದ ಚಿನ್ನಾಭರಣ, ಇತರ ವಸ್ತುಗಳಲ್ಲಿ ವ್ಯತ್ಯಾಸ ಉಂಟಾಗಬಹುದು’ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.

ಸಮಿತಿಯ ಮತ್ತೊಬ್ಬ ಪ್ರಮುಖ ರಾಜಗೋಪಾಲ ಅಡಿ ಮಾತನಾಡಿ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಪ್ಪನ್ನು ತಿದ್ದಿಕೊಳ್ಳಲು ಮಹಾಬಲೇಶ್ವರ ದೇವರು ಒಂದು ಅವಕಾಶ ನೀಡಿದ್ದಾರೆ. ಆದರೆ, ಅವರು ಈಗಲೂ ಮಠದ ಕಡೆಯೇ ಒಲವು ತೋರಿಸುತ್ತಿದ್ದಾರೆ’ ಎಂದು ದೂರಿದರು.

ನಾಲ್ಕೈದು ದಿನದಲ್ಲಿ ಸಾಧ್ಯತೆ:

‘ಸರ್ಕಾರವು ಇನ್ನೂ ಸಮಿತಿಯ ಸದಸ್ಯರನ್ನು ನೇಮಿಸಿಲ್ಲ. ಅಲ್ಲದೇ ಹಸ್ತಾಂತರ ಪ್ರಕ್ರಿಯೆ ನಡೆಸುವಾಗ ನಮ್ಮ ಸಿಬ್ಬಂದಿ, ದೇವಸ್ಥಾನಕ್ಕೆ ಸಂಬಂಧ ಪಟ್ಟವರು, ಉಪಾಧಿವಂತರು, ಪೊಲೀಸರು ಸೇರಿದಂತೆ ಬಹಳ ಜನರ ಅವಶ್ಯಕತೆ ಇರುತ್ತದೆ. ಇದು ಕೋವಿಡ್ ನಿಯಮಾವಳಿ ಪಾಲನೆಗೂ ತೊಂದರೆ ಆಗಬಹುದು. ಹಾಗಾಗಿನಾಲ್ಕೈದು ದಿವಸದಲ್ಲಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT