ಬಿಜೆಪಿಯಿಂದ ಭಯೋತ್ಪಾದನಾ ರಾಜಕೀಯ: ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಆರೋಪ

ಶುಕ್ರವಾರ, ಏಪ್ರಿಲ್ 26, 2019
33 °C

ಬಿಜೆಪಿಯಿಂದ ಭಯೋತ್ಪಾದನಾ ರಾಜಕೀಯ: ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಆರೋಪ

Published:
Updated:
Prajavani

ಶಿರಸಿ: ಸ್ವಾಯತ್ತ ಸಂಸ್ಥೆಗಳ ಮೇಲೆ ಬಿಜೆಪಿ ತನ್ನ ಪ್ರಭಾವ ಬೀರಿ ಕೆಲಸ ಮಾಡಿಸಿಕೊಂಡು ದೇಶದಲ್ಲಿ ಭಯೋತ್ಪಾದನಾ‌ ರಾಜಕೀಯ ಮಾಡುತ್ತಿದೆ. ಉತ್ತರ ಕನ್ನಡ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ ಎಂದು ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಆರೋಪಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನುಮಾನವಿದ್ದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವುದು ತಪ್ಪಲ್ಲ. ಆದರೆ ಒಂದೂವರೆ ತಿಂಗಳಿನಲ್ಲಿ ಐಟಿ ದಾಳಿ ನಡೆದಿದ್ದು ಬಹುತೇಕ ಎಲ್ಲ ಕಾಂಗ್ರೆಸ್, ಜೆಡಿಎಸ್ ಪ್ರಮುಖರ ಮನೆಗಳ ಮೇಲೆಯೇ. ಇದನ್ನು ಕಾಕತಾಳೀಯ ಎಂದು ಹೇಗೆ ಹೇಳಲು ಸಾಧ್ಯ. ಹಾಗಿದ್ದರೆ ಬಿಜೆಪಿಯವರು ಗಂಜಿ ಕುಡಿದು, ಕಾಲ್ನಡಿಗೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.

ಸ್ವಾಯತ್ತ ಸಂಸ್ಥೆಗಳಾಗಿರುವ ಆರ್‌ಬಿಐ, ಸಿಬಿಐ ಈಗ ಐಟಿಯಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುತ್ತಿದೆ. ಈ ಬಾರಿ ಅತಿ ಹೆಚ್ಚು ಚುನಾವಣೆ ದೇಣಿಗೆ ಸಂಗ್ರಹಿಸಿದ್ದು, ಜಾಹೀರಾತಿಗೆ ಖರ್ಚು ಮಾಡಿದ್ದು ಬಿಜೆಪಿ. ರಾಜಕೀಯ ಲಾಭಕ್ಕಾಗಿ ದೋಸ್ತಿ ಪಕ್ಷಗಳ ನಾಯಕರನ್ನು ಗುರಿಯಾಗಿಟ್ಟು ಕೆಲಸ ಮಾಡುತ್ತಿದೆ. ಸ್ವಜನ ಪಕ್ಷಪಾತ ಮಾಡಿ, ಭಯಹುಟ್ಟಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ ಎಂದು ದೂರಿದರು.

ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು, ವಾಸ್ತವದ ಸಮಸ್ಯೆಗಳನ್ನು ಮರೆಮಾಚಿ ಬಿಜೆಪಿ ಮತಯಾಚಿಸುತ್ತಿದೆ. ಕ್ಷೇತ್ರ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ಕೃಷಿ ಬೆಳೆಗಳಿಗೆ ನಿರಂತರ ಸಮಸ್ಯೆಯಾಗುತ್ತಿದ್ದರೂ, ಸಮಗ್ರ ವಿಮಾ ಯೋಜನೆ ಜಾರಿಗೊಳಿಸುವ ಯೋಚನೆ ನಡೆದಿಲ್ಲ. 1980 ಅರಣ್ಯ ಕಾಯ್ದೆಯಲ್ಲಿ ತಿದ್ದುಪಡಿ ತರಲು ಯೋಚಿಸಬಹುದಾಗಿತ್ತು. ಜಿಲ್ಲೆಗೆ ರೈಲು ಮಾರ್ಗ ತರುವ ವಿಚಾರದ ಪ್ರಸ್ತಾಪವಿಲ್ಲ. ಪ್ರಜಾಪ್ರಭುತ್ವಕ್ಕೆ ಪೂರಕವಾದ ಕಾರ್ಯಕ್ರಮದ ಬಗ್ಗೆ ಬಿಜೆಪಿ ಮಾತನಾಡಲಿ ಎಂದು ಒತ್ತಾಯಿಸಿದರು.

ಅಭಿವೃದ್ಧಿ ನಡೆಯದ ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಬೂತ್ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌ ಪರ ಜನರಿಗೆ ಒಲವಿದೆ ಎಂದು ಹೇಳಿದರು. ಪ್ರಮುಖರಾದ ಎನ್‌.ಎಸ್.ಹೆಗಡೆ, ಸೈಯದ್ ಮುಜೀಬ್, ಸುಭಾಷ ಮಂಡೂರು, ತಿಮ್ಮಪ್ಪ ಮಡಿವಾಳ, ರೇವತಿ ವಡ್ಡರ್, ನಾರಾಯಣ ನಾಯ್ಕ, ಸಚಿನ್ ಇದ್ದರು.

 

 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !